ಲಿಟ್ಟಲ್​ ಸ್ಟಾರ್​ ಅಲ್ಲ, ರಿಯಲ್​ ಸ್ಟಾರ್​ ಗರಡಿಯಲ್ಲಿ ಪಳಗಿರೋ ಸೂಪರ್​ಸ್ಟಾರ್​ ...

Superstar - Final
Published on

ಬೆಂಗಳೂರು: ಉಪೇಂದ್ರ ಅವರ ಅಣ್ಣನ ಮಗ ನಿರಂಜನ್​ ಸುಧೀಂದ್ರ, 'ಸೂಪರ್​ಸ್ಟಾರ್​' ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಚಿತ್ರ ಮಾತ್ರ ಶುರುವಾಗಿರಲಿಲ್ಲ. ಇದೀಗ ಚಿತ್ರದ ಮುಹೂರ್ತವು ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ.

'ಲೇ ಮಚಾ ... ತೆಳ್ಳಗೆ ಬೆಳ್ಳಗೆ ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ? ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ ...’ ಎಂದು ನಾಯಕ ಖಡಕ್​ ಡೈಲಾಗ್​ ಹೇಳುವ ಮೊದಲ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉಪೇಂದ್ರ, ಪ್ರೇಮ್​ ಮುಂತಾದವರು ಹಾಜರಿದ್ದರು.

ನಂತರ ಮಾತನಾಡಿದ ಉಪೇಂದ್ರ, ‘ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಮ್ಮ ಮನೆಮಂದಿಯೆಲ್ಲ ನಿರಂಜನ್​ನನ್ನು ನೋಡಿ ಜಿಮ್​ ಸೇರಿದ್ದಾರೆ. 19ನೇ ವರ್ಷಕ್ಕೆ ಜಿಮಿನಾಸ್ಟಿಕ್ ಶುರುಮಾಡಿದ. ಅದಾದ ಬಳಿಕ ಡಾನ್ಸ್​, ಜಿಮ್, ಡ್ರಾಮಾ ಹೀಗೆ ಸಿನಿಮಾಕ್ಕಾಗಿ ತುಂಬ ಶ್ರಮ ಹಾಕುತ್ತಿದ್ದಾನೆ. ಪರಿಶ್ರಮ ಇದ್ದರೆ ಮಾತ್ರ ಯಶಸ್ಸು. ಪಟ್ಟಂತ ಯಾರು ಸೂಪರ್​ಸ್ಟಾರ್ ಆಗಲು ಸಾಧ್ಯವಿಲ್ಲ. ಯೋಗ್ಯತೆ ಬೇಕು. ಅದೊಂದು ದೊಡ್ಡ ಪದವಿ' ಎಂದರು.

ಈ ಸಿನಿಮಾ ಶುರುವಾದಾಗಿನಿಂದ ಯಶ್, ಶ್ರೀಮುರಳಿ, ಪ್ರೇಮ್, ಶಿವಣ್ಣ. ಪುನೀತ್​ ಸೇರಿದಂತೆ ಬಹಳಷ್ಟು ನಟರು ಬೆಂಬಲಿಸುತ್ತಿದ್ದಾರೆ ಎಂದ ಉಪೇಂದ್ರ, 'ಅದರಲ್ಲೂ 87ರ ಪ್ರಾಯದ ಮೂಗೂರು ಸುಂದರ್​ ಅವರೂ ಸಾಥ್ ನೀಡಿದ್ದಾರೆ. ನಿಜಕ್ಕೂ ನಿರಂಜನ್​ಗಿದು ವಿಶೇಷ. ಮುಹೂರ್ತಕ್ಕೆ ಬಂದಂತೆ, ಚಿತ್ರ ಬಿಡುಗಡೆಯಾದಾಗ ಚಿತ್ರ ಮಂದಿರಕ್ಕೂ ಇದೇ ರೀತಿ ಜನ ಬರಲಿ' ಎಂದು ಆಶಿಸುತ್ತೇನೆ ಎಂದರು.

ನಂತರ ಮಾತನಾಡಿದ ನಾಯಕ ನಿರಂಜನ್, ‘ನನಗೆ ಸಿನಿಮಾದಲ್ಲೇ ಏನಾದರೂ ಮಾಡಬೇಕೆಂಬ ತುಡಿತ ಇದೆ. ತುಂಬ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು 'ಸೂಪರ್​ಸ್ಟಾರ್' ಮೂಲಕ ಸಿಕ್ಕಿತು. ಡಾನ್ಸಿಂಗ್​ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಮೆಸೆಜ್ ಸಹ ಇದರಲ್ಲಿದೆ‘ ಎಂದರು.

ಈ ಚಿತ್ರವನ್ನು ರಾಮ್​ವೆಂಕಟೇಶ್​ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಮಾಸ್ಟರ್ ಅವರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ. ಯೋಗಿ ಅವರ ಛಾಯಾಗ್ರಹಣ ಮತ್ತು ರಾಘವೇಂದ್ರ ವಿ ಸಂಗೀತ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net