ಕಾರ್ಮಿಕರ ನೆರವಿಗೆ ನಿಲ್ತಾರಾ ನಿಖಿಲ್ ಕುಮಾರಸ್ವಾಮಿ!: ಏನವರ ಪ್ಲ್ಯಾನ್?

Nikhil Kumar
Published on

ಕರೊನಾದಿಂದ ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿ ಕೆಲವು ದಿನಗಳೇ ಆಗಿವೆ. ಇದರಿಂದಾಗಿ ಚಿತ್ರರಂಗವನ್ನೇ ನಂಬಿಕೊಂಡಿರುವ ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಬೇರೆ ಭಾಷೆ ಸ್ಟಾರ್‌ಗಳು ಕಾರ್ಮಿಕರಿಗೆ ಉದಾರವಾಗಿ ಧನಸಹಾಯ ಮಾಡುತ್ತಿದ್ದರೆ, ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳು ಇನ್ನಷ್ಟೇ ಮನಸ್ಸು ಮಾಡಬೇಕಿದೆ.

ಕರೊನಾದಿಂದ ಚಿತ್ರರಂಗ ಬಂದ್ ಆಗಿ ಹಲವು ದಿನಗಳೇ ಆಗಿದ್ದರೂ, ಇದುವರೆಗೂ ಕನ್ನಡದ ದೊಡ್ಡ ಕಲಾವಿದರು ಮತ್ತು ತಂತ್ರಜ್ಞರು, ದಿನಗೂಲಿ ಕಾರ್ಮಿಕರ ನೆರವಿಗೆ ಬಂದಿಲ್ಲ. ಈ ಮಧ್ಯೆ, ನಟ-ನಿರ್ದೇಶಕ ‘ಲೂಸಿಯಾ’ ಪವನ್ ಕುಮಾರ್ ಅವರು ಕಾರ್ಮಿಕರಿಗೆ ಅನುಕೂಲವಾಗುವಂತೆ ಸುಮಾರು ಐದು ಲಕ್ಷ ರೂಪಾಯಿಗಳನ್ನು ಫಂಡ್ ರೈಸ್ ಮಾಡಿ, ಅದನ್ನು ಕಾರ್ಮಿಕರಿಗೆ ಹಂಚುವ ಕೆಲಸ ಮಾಡಿದ್ದಾರೆ. ಹೀಗೆ ಚಿತ್ರರಂಗದ ಇನ್ನೊಂದಿಷ್ಟು ಮಂದಿ, ತಮ್ಮದೇ ರೀತಿಯಲ್ಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ.

ಈಗ ನಿಖಿಲ್ ಕುಮಾರ್ ಸಹ ತಮ್ಮದೇ ರೀತಿಯಲ್ಲಿ ಕಾರ್ಮಿಕರ ಸಹಾಯಕ್ಕಾಗಿ ನಿಂತಿದ್ದಾರೆ. ಇದಕ್ಕೂ ಮುನ್ನ ಲೈಟ್ ಬಾಯ್ಸ್​, ಯೂನಿಟ್ ಬಾಯ್ಸ್​, ಫೈಟರ್ಸ್, ಮೇಕಪ್ ಕಲಾವಿದರಿಗೆ ಅವರು ಧವಸ ಹಂಚುವ ಯೋಜನೆ ಹಾಕಿಕೊಂಡಿದ್ದರು. ಕರ್ನಾಟಕ ಚಲನಚಿತ್ರ ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟದಲ್ಲಿ 15ಕ್ಕೂ ಹೆಚ್ಚು ಸಂಘಗಳು ಮತ್ತು ಸಾವಿರಾರು ಕಾರ್ಮಿಕರು ಇದ್ದಾರೆ. ಅವರೆಲ್ಲಾ ಒಟ್ಟಿಗೆ ಸೇರಿದರೆ ಕಷ್ಟವಾಗುತ್ತದೆ ಎಂಬ ವಿಷಯ ಸ್ಪಷ್ಟವಾಗುತ್ತಿದ್ದಂತೆಯೇ, ಆ ಕಾರ್ಮಿಕರ ಅಕೌಂಟ್‌ಗೆ ನೇರವಾಗಿ ಧನ ಸಹಾಯ ಮಾಡಲು ನಿಖಿಲ್ ತೀರ್ಮಾನಿಸಿದ್ದಾರೆ.  ಸದ್ಯದಲ್ಲೇ ನಿಖಿಲ್ ಕಡೆಯಿಂದ ಚಲನಚಿತ್ರ ಕಾರ್ಮಿಕರ ಅಕೌಂಟಿಗೆ ನೇರವಾಗಿ ಒಂದು ಸಾವಿರ ರೂ, ಜಮೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net