

ಬೆಂಗಳೂರು: ಕರೊನಾ ಹಾವಳಿಯಿಂದ ಎಲ್ಲರೂ ಮನೆಯಲ್ಲಿದ್ದಾರೆ. ಹೇಗಿದ್ದೀರಾ? ಹೊರಗಡೆ ಹೋಗಬೇಡಿ, ಆರೋಗ್ಯದ ಕಡೆ ಗಮನ ಹರಿಸಿ ಎಂದಷ್ಟೇ ಫೋನ್‌ನಲ್ಲೇ ಹೇಳುವಂತಾಗಿದೆ. ಭೇಟಿಯಾಗುವುದಂತೂ ದೂರದ ಮಾತು. ಹೀಗಿರುವಾಗ ಸ್ಯಾಂಡಲ್‌ವುಡ್‌ನ ಚಡ್ಡಿ ದೋಸ್ತ್‌ಗಳೆಲ್ಲ ಒಂದೆಡೆ ಸೇರಿದ್ದಾರೆ. ಹಾಡು, ಹರಟೆ, ಒಂದಷ್ಟು ಬೋಧನೆ ಮತ್ತೊಂದಿಷ್ಟ ಮುಂದಾಲೋಚನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅರೇ.. ಇವರಿಗೆ ಲಾಕ್‌ಡೌನ್ ಅನ್ವಯಿಸುವುದಿಲ್ಲವಾ? ಹಾಗೇನು ಇಲ್ಲ.. ಅಕ್ಕ ಪಕ್ಕ ಕುಳಿತುಕೊಂಡು ಅವರೆಲ್ಲರು ಹರಟೆ ಹೊಡೆದಿಲ್ಲ. ಬದಲಿಗೆ ವಿಡಿಯೋ ಚಾಟ್ ಮೂಲಕ ತುಂಬ ದಿನಗಳ ಬಳಿಕ ಒಂದಾಗಿದ್ದಾರೆ.
ನಟರಾದ ಗಣೇಶ್, ದಿಗಂತ್ ಮಂಚಾಲೆ, ರವಿಶಂಕರ್ ಗೌಡ ಮತ್ತು ನಿರ್ದೇಶಕ ಪ್ರೀತಮ್ ಗುಬ್ಬಿ ವಾಟ್ಸಾಪ್ ಕಾಲ್ ಮೂಲಕ ಒಬ್ಬರಿಗೊಬ್ಬರು ಎದುರಾಗಿದ್ದಾರೆ. ಲಾಕ್ ಡೌನ್ ಆದ ಬಗ್ಗೆ ಪರಸ್ಪರರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ನಾಲ್ಕು ಜನ ಇರುವ ಫೋಟೋದ ಸ್ಕ್ರೀನ್‌ಶಾಟ್ ಅನ್ನು ಗಣೇಶ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ರವಿಶಂಕರ್ ಗೌಡ ಅವರ ಭಂಗಿಯನ್ನು ನೋಡಿ, ‘ಗೌಡ ಇದು ಶೂಟಿಂಗ್ ಅಲ್ಲ ಕಣೋ. ಪೇಮೆಂಟ್ ಇಲ್ಲ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ನಾವು ಯಥಾ ಪ್ರಕಾರ ನೋಡಿದಂತೆ, ದಿಗಂತ್ ಜೀವನದಲ್ಲಿ ಯಾವತ್ತೂ ಮುಂಜಾವನ್ನು ನೋಡಿಲ್ಲ ಅಂತ ಕಾಣುತ್ತೆ.. ಈ ವಿಡಿಯೋ ಚಾಟ್‌ನ ನಿರ್ದೇಶಕರು ಪ್ರೀತಮ್ ಗುಬ್ಬಿ’ ಎಂದು ಕಾಮಿಡಿಯಾಗಿ ಕ್ಯಾಪ್ಷನ್ ನೀಡಿದ್ದಾರೆ ಗಣೇಶ್. ಕೊನೆಗೆ ಗಣೇಶ್ ಪುತ್ರಿ ಚಾರಿತ್ರ್ಯಳ ಜನ್ಮ ದಿನಕ್ಕೆ ಎಲ್ಲರೂ ಶುಭ ಕೋರಿದ್ದಾರೆ.
ಅಂದಹಾಗೆ, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಟಿಸುತ್ತಿದ್ದು, ಸದ್ಯ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಮನೆಯಲ್ಲಿದೆ ಇಡೀ ತಂಡ.