ಅಪ್ಪನ ದಾರಿಯಲ್ಲಿ ಮಗ ... ನಿರ್ಮಾಣದತ್ತ ನಿಖಿಲ್​ ಕುಮಾರ್​

Nikhil Kumar - Final
Published on

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕ-ಪ್ರದರ್ಶಕರಾಗಿ ಗುರುತಿಸಿಕೊಂಡವರು. ಡಾ. ವಿಷ್ಣುವರ್ಧನ್​ ಅಭಿನಯದ 'ಸೂರ್ಯವಂಶ', ಶಿವರಾಜಕುಮಾರ್​ ಅಭಿನಯದ 'ಗಲಾಟೆ ಅಳಿಯಂದ್ರು' ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು.

ಈಗ ಅವರ ಮಗ ನಿಖಿಲ್​ ಸಹ ಅಪ್ಪನ ಹಾದಿಯಲ್ಲೇ ನಡೆದಿದ್ದಾರೆ. ಈಗಾಗಲೇ 'ಜಾಗ್ವಾರ್​', 'ಕುರುಕ್ಷೇತ್ರ', 'ಸೀತಾರಾಮ ಕಲ್ಯಾಣ' ಚಿತ್ರಗಳಲ್ಲಿ ನಟಿಸಿರುವ ನಿಖಿಲ್​, ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಸಾದ್​ ಖಾನ್​ ನಿರ್ದೇಶನದಲ್ಲಿ ಇದೀಗ 'ಸಂಗೀತ್​' ಎಂಬ ಚಿತ್ರವನ್ನು ನಿರ್ಮಿಸುವತ್ತ ಚಿತ್ರ ಹರಿಸಿದ್ದಾರೆ.

ಸಾದ್​ ಖಾನ್​ ಇದಕ್ಕೂ ಮುನ್ನ 'ಹಂಬಲ್​ ಪೊಲಿಟಿಶಿಯನ್​ ನೊಗರಾಜ್​' ಎಂಬ ಕಾಮಿಡಿ ಚಿತ್ರ ನಿರ್ದೇಶಿಸಿದ್ದರು. ಇದೀಗ ಅವರ 'ಸಂಗೀತ್' ಎಂಬ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಈ ಚಿತ್ರವನ್ನು ನಿಖಿಲ್​ ಮತ್ತು ಚಂದ್ರ ಮನೋಹರ್​ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಚಂದ್ರ ಮನೋಹರ್​, ಲಹರಿ ಸಂಸ್ಥೆಯ ಮನೋಹರ್​ ನಾಯ್ಡು ಅವರ ಮಗನಾಗಿದ್ದು, ನಿಖಿಲ್​ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.

ಈಗಾಗಲೇ ಆ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಕರೊನಾ ಹಾವಳಿಯಿಂದ ನಿಂತಿದೆ. ಈ ಮಧ್ಯೆ, ಸಾದ್​ ಖಾನ್​ ಹೇಳಿರುವ ಕಥೆಯನ್ನು ಕೇಳಿ ಖುಷಿಯಾಗಿರುವ ನಿಖಿಲ್​, ಆ ಚಿತ್ರವನ್ನು ನಿರ್ಮಿಸುವುದಕ್ಕೆ ಚಂದ್ರು ಜತೆಯಾಗಿದ್ದಾರೆ.

ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಅಕ್ಟೋಬರ್​ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರದ ಕಲಾವಿದರು, ತಂತ್ರಜ್ಱರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ಅಂದಹಾಗೆ, ಈ ಚಿತ್ರದಲ್ಲಿ ನಿಖಿಲ್​ ನಟಿಸುತ್ತಿಲ್ಲವಂತೆ, ಬರೀ ಬಂಡವಾಳವನ್ನು ಮಾತ್ರ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net