

ಬೆಂಗಳೂರು: ಗಣಪತಿಯ ತುಂಡಾದ ಶಿರ ಏನಾಯ್ತು? ಪರಮೇಶ್ವರನ ಕೊರಳಿನಲ್ಲಿರುವ ರುಂಡ ಯಾರದ್ದು? ಐರಾವತಕ್ಕೆ ಶಾಪ ನೀಡಿದ್ದೇಕೆ? ಇಂತಹ ಪ್ರಶ್ನೆಗಳು ನಿಮಗೂ ಬಂದಿರಬಹುದು. ಅದಕ್ಕೆ ಸೂಕ್ತ ಉತ್ತರಗಳು ಸಿಗದಿರಬಹುದು. ಇಂಥ ವಿಶಿಷ್ಟ ಪ್ರಶ್ನೆಗಳಿಗೆ ದೃಶ್ಯಗಳ ಮೂಲಕ ಉತ್ತರ ಕಟ್ಟಿ ಕೊಡುವ ಪ್ರಯತ್ನ ಸಿರಿಕನ್ನಡ ಚಾನಲ್ನಲ್ಲಿ ಆಗುತ್ತಿದೆ. ವಾಹಿನಿಯು ಜ.31ರಿಂದ ‘ಮಹಾಪುರಾಣ’ ಎಂಬ ಹೊಸ ಧಾರಾವಾಹಿಯನ್ನು ಪ್ರಾರಂಭಿಸಿದ್ದು, ಪುರಾಣದ ಕುರಿತಾಗಿ ವೀಕ್ಷಕರ ಎಲ್ಲ ಪ್ರಶ್ನೆಗಳಿಗೂ ಅದರಲ್ಲಿ ಉತ್ತರ ಸಿಗಲಿವೆ.
‘ಮಹಾಪುರಾಣ’ದ ಕಥೆಯೇ ಒಂದು ಅದ್ಭುತ ಪರಿಕಲ್ಪನೆ. ಭಗವಾನ್ ಕೃಷ್ಣನು ರಾಧೆಗೆ ಪುರಾಣದ ಪುಣ್ಯ ಕಥೆಗಳಲ್ಲಿನ ಪ್ರಶ್ನೆಗಳಿಗೆ ಕಥೆಗಳ ಮೂಲಕ ಉತ್ತರ ಕೊಡುವ ಪ್ರಕ್ರಿಯೆಯೇ ಈ ‘ಮಹಾ ಪುರಾಣ’. ಈ ಧಾರಾವಾಹಿಯು ಕಣ್ಸೆಳೆಯುವ ಗ್ರಾಫಿಕ್ಸ್ ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ಪೌರಾಣಿಕ ಧಾರಾವಾಹಿಗಳ ಸಾಲಿನಲ್ಲಿ ಹೊಸ ಪ್ರಯತ್ನವಾಗಲಿದೆ. ಈ ಧಾರಾವಾಹಿ ಪ್ರತಿ ಸಂಚಿಕೆಯಲ್ಲೂ ಹಾಡುಗಳನ್ನು ಬಳಸ ಲಾಗಿದ್ದು, ಜನವರಿ 31ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಇನ್ನು, ಸಿರಿಕನ್ನಡ ವಾಹಿನಿಯು ಕಿರುತೆರೆಯ ಲೋಕದಲ್ಲಿ ವಿಭಿನ್ನ ಪ್ರಯತ್ನಗಳೊಂದಿಗೆ ಗಮನಸೆಳೆಯುತ್ತಿದೆ. ಈಗಾಗಲೇ ಜನವರಿ 24ರಂದು ‘ಅಮರ ಮಧುರ ಪ್ರೇಮ’ (ಸಂಜೆ 6ಕ್ಕೆ), ‘ವೈಫ್ ಆಫ್ ಕೃಷ್ಣಮೂರ್ತಿ’ (ರಾತ್ರಿ 8ಕ್ಕೆ) ಮತ್ತು ‘ಸರ್ಕಾರಿ ನ್ಯಾಯಬೆಲೆ ಅಂಗಡಿ ಪಾಂಡವಪುರ’ (ರಾತ್ರಿ 8.30ಕ್ಕೆ) ಎಂಬ ಧಾರಾವಾಹಿಗಳು ಮತ್ತು ಹಾಸ್ಯ ದಿಗ್ಗಜರು ನಡೆಸಿ ಕೊಡುವ ‘ಹಾಸ್ಯ ದರ್ಬಾರ್’ (ರಾತ್ರಿ 7ಕ್ಕೆ) ಎಂಬ ಹಾಸ್ಯಮಯ ಕಾರ್ಯಕ್ರಮ ಪ್ರಸಾರ ಆರಂಭಿಸಿವೆ. ಈ ಎಲ್ಲ ಜನಪ್ರಿಯ ಧಾರಾವಾಹಿಗಳು ಮತ್ತು ಕಾರ್ಯಕ್ರಮ ಗಳ ಸಾಲಿಗೆ ‘ಮಹಾಪುರಾಣ’ ಸಹ ಸೇರಲಿದೆ ಎಂಬ ನಿರೀಕ್ಷೆ ಇದೆ ಎಂದು ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಮತ್ತು ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.