

ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದಿಂದ ಯಾವುದೇ ಅಪ್ಡೇಟ್ಗಳಿಲ್ಲ ಎಂದು ಅಭಿಮಾನಿಗಳು ಬೇಸರಿಸಿಕೊಳ್ಳುತ್ತಲೇ ಇದ್ದಾರೆ. ಏಕೆಂದರೆ, ಈ ಹಿಂದೆ ಒಂದು ಹಾಡು ಮತ್ತು ಟೀಸರ್ ಬಿಟ್ಟರೆ, ಬೇರೇನೂ ಬಿಡುಗಡೆಯಾಗಿಲ್ಲ. ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಸುದೀಪ್ ಅವರ ಸಖತ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ವಲ್ಪ ಸಮಾಧಾನ ಪಡಿಸಿಲಾಗಿದೆ.
ಅಂದಹಾಗೆ, ಪೋಸ್ಟರ್ ಬಿಡಗುಡೆಯಾಗಿದ್ದಕ್ಕೆ ಕಾರಣ, ನಿರ್ಮಾಪಕರ ಹುಟ್ಟುಹಬ್ಬ. ಇಂದು 'ಕೋಟಿಗೊಬ್ಬ 3' ಚಿತ್ರದ ನಿರ್ಮಾಪಕ ಎಂ.ಬಿ. ಬಾಬು ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಸ್ವತಃ ಸುದೀಪ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಈ ಪೋಸ್ಟರ್ ಬಿಡುಗಡೆ ಮಾಡಿ, ಬಾಬುಗೆ ಶುಭ ಹಾರೈಸಿದ್ದಾರೆ.
ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಮುಗಿದಿತ್ತು. ಏಪ್ರಿಲ್-ಮೇ ಹೊತ್ತಿಗೆ ಚಿತ್ರ ಬಿಡಗುಡೆಯಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರದ ಕೆಲಸಗಳೆಲ್ಲಾ ನಿಂತವು. ಈಗ ಲಾಕ್ಡೌನ್ ತೆರವಾಗಿ, ಚಿತ್ರ ಚಟುವಟಿಕೆಗಳು ಶುರುವಾಗಿದೆ. ಈ ಮಧ್ಯೆ, 'ಕೋಟಿಗೊಬ್ಬ 3' ಯಾವಾಗ ಬಿಡುಗಡೆಯಾಗುತ್ತದೆ ಎಂದು ಸುದೀಪ್ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, 'ಬಹಳಷ್ಟು ಜನ 'ಕೋಟಿಗೊಬ್ಬ 3' ಕುರಿತು ಏನಾದರೂ ಅಪ್ಡೇಟ್ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಸಹ ಬಹುತೇಕ ಮುಗಿದಿದೆ. ಈ ಮಧ್ಯೆ ಲಾಕ್ಡೌನ್ ಆಗಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುತ್ತೇವೆ' ಎಂದು ಸುದೀಪ್ ಹೇಳಿಕೊಂಡಿದ್ದರು.
'ಕೋಟಿಗೊಬ್ಬ 3' ಚಿತ್ರದಲ್ಲಿ ಸುದೀಪ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ನಟಿಸಿದ್ದಾರೆ. ಶಿವಕಾರ್ತಿಕ್ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ಒಂದು ಹಾಡು ಜನಪ್ರಿಯವಾಗಿದೆ.