

ಬೆಂಗಳೂರು: ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಸಂದರ್ಭದಲ್ಲೇ ತಮ್ಮ ‘ಸೆವೆನ್ ಆಡ್ಸ್’ ತಂಡದ 7 ಸದಸ್ಯರಿಗೆ ಒಂದೊಂದು ಚಿತ್ರ ಮಾಡಿಕೊಡಿ ಎಂದು ಕೇಳಿದ್ದರಂತೆ ರಕ್ಷಿತ್. ಆದರೆ, ಆದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ‘777 ಚಾರ್ಲಿ’ಯ ಯಶಸ್ಸು, ರಕ್ಷಿತ್ಗೆ ಹೊಸ ಉತ್ಸಾಹ ಕೊಟ್ಟಿದೆ.
ಅದೇ ಉತ್ಸಾಹದಲ್ಲಿ ಅವರು ತಮ್ಮ ಹುಡುಗರಿಗೆ ಚಿತ್ರ ಮಾಡುವುದಕ್ಕೆ ಹೇಳಿದ್ದು, ಮೊದಲ ಹಂತವಾಗಿ ಎರಡು ಚಿತ್ರಗಳು ರಕ್ಷಿತ್ ಅವರ ಪರಂವಾ ಸ್ಟುಡಿಯೋಸ್ ಬ್ಯಾನರ್ನಡಿ ಸದ್ಯದಲ್ಲೇ ಸೆಟ್ಟೇರಲಿವೆ. ಒಂದು ಚಿತ್ರವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದರೆ, ಇನ್ನೊಂದು ಅಭಿಜಿತ್ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ಅಭಿಜಿತ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಮತ್ತು ದಿಗಂತ್ ಜತೆಯಾಗಿ ನಟಿಸುತ್ತಿರುವುದು ವಿಶೇಷ. ಇತ್ತೀಚೆಗೆ ರಿಷಬ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುವ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
‘ಕಿರಿಕ್ ಪಾರ್ಟಿ’ ಶೈಲಿಯ ಪಕ್ಕಾ ಮನರಂಜನಾತ್ಮಕ ಚಿತ್ರ ಇದು ಎನ್ನುತ್ತಾರೆ ಅಭಿಜಿತ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘‘ಕಿರಿಕ್ ಪಾರ್ಟಿ’ ನಂತರ ಪರಂವಾ ಸ್ಟುಡಿಯೋಸ್ನಿಂದ ಅಂಥದ್ದೊಂದು ಮಜವಾದ ಚಿತ್ರ ಬಂದಿರಲಿಲ್ಲ. ಇದು ಅದೇ ಶೈಲಿಯ ಚಿತ್ರ ಆಗಲಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾಗಿದೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ರಿಷಬ್ ಹುಟ್ಟುಹಬ್ಬದ ಕಾರಣ ಚಿತ್ರವನ್ನು ಘೋಷಿಸಲಾಗಿದೆ. ಮಿಕ್ಕಂತೆ, ಮುಂದಿನ ದಿನಗಳಲ್ಲಿ ಹೆಸರು ಸೇರಿದಂತೆ ಒಂದೊಂದೇ ವಿಷಯವನ್ನು ಬಹಿರಂಗ ಗೊಳಿಸಲಾಗುತ್ತದೆ’ ಎನ್ನುತ್ತಾರೆ ಅಭಿಜಿತ್.