ವಿಜಯವಾಣಿ ಸಿನಿಮಾ ವಿಮರ್ಶೆ: ಅಮ್ಮನ ಅರಸುತ ಹತ್ತಿರ ಹತ್ತಿರ...

NB 1
Published on

ಬೆಂಗಳೂರು: ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಆಗಿದ್ದರೂ ಈ ಸಿನಿಮಾದಲ್ಲಿರುವ ಕಥಾವಸ್ತುವಿನಲ್ಲಿ ಹದಿಹರೆಯದ ಪ್ರೀತಿಗಿಂತ ಅಮ್ಮನ ಪ್ರೀತಿಗೇ ಆದ್ಯತೆ. ಅಮ್ಮನ ಪ್ರೀತಿ ಹುಚ್ಚು ಹಿಡಿಸಬಹುದು, ಹುಚ್ಚನ್ನು ಬಿಡಿಸಲೂಬಹುದು ಎಂಬುದೇ ಇಲ್ಲಿನ ಕಥಾಹಂದರ. ಎಲ್ಲಕ್ಕಿಂತ ಹೆಚ್ಚು ಅಮ್ಮ ನಾವಂದುಕೊಂಡಷ್ಟೇ ಅಲ್ಲ, ನಮ್ಮ ಅರಿವಿಗೂ ಮಿಗಿಲಾದವರು. ಹಾಗಂತ ಇಲ್ಲಿರುವುದು ಅಮ್ಮನೆಡೆಗಿನ ಪ್ರೀತಿ ಮಾತ್ರವಲ್ಲ, ದ್ವೇಷ ಕೂಡ. ಅಮ್ಮನನ್ನು ಪ್ರೀತಿಸುವ ಹಾಗೂ ಅಮ್ಮನನ್ನು ದ್ವೇಷಿಸುವ ಎರಡು ಪಾತ್ರಗಳೊಂದಿಗೆ ಸಮಾನಾಂತರವಾಗಿ ದೂರ ದೂರ ಸಾಗುತ್ತ ಪ್ರೇಕ್ಷಕರಿಗೆ ಹತ್ತಿರ ಹತ್ತಿರವಾಗುತ್ತ ಹೋಗಿದ್ದಾರೆ ನಿರ್ದೇಶಕರು. ಆ ಮೂಲಕ ಪ್ರೇಕ್ಷಕರಲ್ಲಿ ಅಮ್ಮನ ಬಗ್ಗೆ ವಿಶೇಷ ಪ್ರೀತಿ ಉಂಟಾಗಿಸುವ, ಇರುವ ಮಮತೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವಿತೇಜ.

ಅಮ್ಮನಿಗಾಗಿ ಪರಿತಪಿಸುವ ಶಾಲಾ ವಿದ್ಯಾರ್ಥಿ ಆಶು ಆಗಿ ಕಾಣಿಸಿಕೊಂಡಿರುವ ಬಾಲಕ (ಆಶಿಕ್ ಆರ್ಯ), ಅಮ್ಮನ ಪ್ರೀತಿ ಸಿಗದೆ ಪಾಗಲ್​ನಂತಾಡುವ ಮಹೇಶ್ ಆಗಿ ಕಾಣಿಸಿಕೊಂಡಿರುವ ಮಹೇಶ್ ಸಿದ್ದು ಇಡೀ ಚಿತ್ರದ ಹೈಲೈಟ್. ನನ್ನ ಮುತ್ತು ಅಮ್ಮನಿಗೆ ಮಾತ್ರ ಎಂದು ಶಾಲೆಯಿಂದ ತಪ್ಪಿಸಿಕೊಂಡು ಅಮ್ಮನನ್ನು ಹುಡುಕುತ್ತ ಸಾಗುವ ಆಶು, ಅಮ್ಮ ಸಿಕ್ಕರೆ ಸಾಕು ಕೊಂದೇ ಬಿಡುತ್ತೇನೆ ಎಂದು ಮಾನಸಿಕ ರೋಗಿಗಳ ಆಸ್ಪತ್ರೆಯಿಂದ ತಪ್ಪಿಸಿಕೊಂಡು ತಾಯಿಯನ್ನು ಅರಸಿಕೊಂಡು ಹೊರಡುವ ಮಹೇಶ್ ಇಬ್ಬರೂ ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಹೀಗೆ ತಾಯಿಯನ್ನು ಹುಡುಕಿಕೊಂಡು ಹೋಗುವ ಇವರ ಪ್ರಯಾಣದ ಮಧ್ಯೆ ಹದಿಹರೆಯದ ಪ್ರೀತಿ, ಬಳಿಕದ ಮೋಸ, ನಂತರದ ಪರದಾಟ, ಹುಡುಗಾಟದ ಕೊಲೆ, ಹುಚ್ಚಾಟದ ಹೊಡೆದಾಟ, ಅಪರಾಧಿಗಳಿಗಾಗಿ ಪೊಲೀಸರ ಹುಡುಕಾಟ ಎಲ್ಲವನ್ನೂ ಹದವಾಗಿ ಬೆರೆಸಿ ಹಿತವಾದ ಚಿತ್ರಣ ಕಟ್ಟಿಕೊಟ್ಟಿದ್ದಾರೆ ರವಿತೇಜ. ಬಾಲಕ ಆಶು ಸನ್ನಿವೇಶಕ್ಕೆ ತಕ್ಕಂತೆ ಉತ್ತಮ ಅಭಿನಯ ತೋರುವ ಮೂಲಕ ಭವಿಷ್ಯದಲ್ಲಿ ಭರವಸೆಯ ನಟನಾಗುವ ಲಕ್ಷಣವನ್ನು ಹೊರಹೊಮ್ಮಿಸಿದ್ದಾರೆ. ಹೀರೋಯಿಸಂ ಇರದಿದ್ದರೂ ಚಿತ್ರದುದ್ದಕ್ಕೂ ಹೀರೋ ಥರನೇ ಕಾಣಿಸಿಕೊಂಡಿರುವ ಮಹೇಶ್ ವಿಲಕ್ಷಣ ಹಾವಭಾವ ಹಾಗೂ ಅಭಿನಯದಿಂದಾಗಿ ಮೆಚ್ಚುಗೆ ಗಳಿಸಿದ್ದಾರೆ. ಲವ್ ಧೋಖಾ ಸೆಕ್ಸ್ ಸುಳಿಗೆ ಸಿಲುಕಿ ನಲುಗುವ ಹುಡುಗಿಯಾಗಿ ಅಭಿನಯಿಸಿರುವ ಅಪೇಕ್ಷಾ ಪುರೋಹಿತ್ ಗಮನ ಸೆಳೆಯುತ್ತಾರೆ. ಉಳಿದಂತೆ ಬಹುತೇಕ ಎಲ್ಲ ಪಾತ್ರಧಾರಿಗಳು
ಇಷ್ಟವಾಗುತ್ತಾರೆ. ಅಂತಿಮವಾಗಿ ಆಶು ಹಾಗೂ ಮಹೇಶ್​ಗೆ ಅಮ್ಮ ಸಿಗುತ್ತಾರಾ ಎಂಬುದನ್ನು ಪರದೆ ಮೇಲೆ ನೋಡುವುದೇ ಒಂದು ಹಿತವಾದ ಭಾವನಾತ್ಮಕ ಅನುಭವ. ಸಾಮಾನ್ಯವಾಗಿ ಅಮ್ಮನಾಗಿ ಮಗ ರೌಡಿ ಆಗುವ ಅಥವಾ ರೌಡಿಸಂ ಮಧ್ಯೆ ಒಂದು ಅಮ್ಮನ ಎಮೋಷನ್ ಇರುವ ಸಿನಿಮಾಗಳು ಅನೇಕ ಬಂದಿವೆ. ಆದರೆ ಅಮ್ಮನನ್ನು ಪ್ರೀತಿಸುವವರು ಕ್ರಿಮಿನಲ್ ಆಗುವುದಿಲ್ಲ ಎನ್ನುವ ಸಂದೇಶ ಸಾರುವ ಈ ಚಿತ್ರ ಒಂದರ್ಥದಲ್ಲಿ ನಿಜವಾದ ಮದರ್ ಸೆಂಟಿಮೆಂಟ್ ಸಿನಿಮಾ. ಇದು ಅಮ್ಮನನ್ನು ಪ್ರೀತಿಸುವವರು ನೋಡಬೇಕಾದ ಹಾಗೂ ಅಮ್ಮನನ್ನು ದ್ವೇಷಿಸುವವರು ನೋಡಲೇಬೇಕಾದ ಸಿನಿಮಾ.

ಚಿತ್ರ: ಸಾಗುತ ದೂರ ದೂರ ನಿರ್ದೇಶನ: ರವಿತೇಜ ನಿರ್ವಣ: ಅಮಿತ್ ಒ. ಪೂಜಾರಿ ಪಾತ್ರವರ್ಗ: ಮಹೇಶ್ ಸಿದ್ದು, ಮಾಸ್ಟರ್ ಆಶಿಕ್ ಆರ್ಯ, ಅಪೇಕ್ಷಾ ಪುರೋಹಿತ್, ಡಾ.ಜಾನ್ವಿ ಜ್ಯೋತಿ, ನವೀನ್ ಕುಮಾರ್ ಮತ್ತಿತರರು

| ರವಿಕಾಂತ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net