ವಿಜಯವಾಣಿ ಸಿನಿಮಾ ವಿಮರ್ಶೆ: ಜೀವನದ ಕಥೆ ಹೇಳುವ ಡೆಮೋ ಪೀಸ್

Demo Piese
Published on

ತಮ್ಮ ಮಕ್ಕಳಿಗಾಗಿ ಕಷ್ಟಪಡುವ ಪೋಷಕರು, ಆದರೆ ಇದನ್ನಾವುದನ್ನು ತಲೆಕೆಡಿಸಿಕೊಳ್ಳದೆ ಬದುಕನ್ನು ಸುಲಭವಾಗಿ ತೆಗೆದುಕೊಂಡು, ಅಡ್ಡ

ದಾರಿಯಲ್ಲಿ ಹಣ ಮಾಡುವ ಕೆಲಸಕ್ಕೆ ಕೈ ಹಾಕುವ ಮಗ. ಇದು ಈ ವಾರ ರಿಲೀಸ್ ಆಗಿರುವ ‘ಡೆಮೋ ಪೀಸ್’ ಸಿನಿಮಾದ ಒನ್​ಲೈನ್. ಒನ್​ಲೈನ್ ಸಿಂಪಲ್ ಆಗಿದ್ದರೂ, ಅದರಲ್ಲಿರುವ ಕೆಲವು ಟ್ವಿಸ್ಟ್​ಗಳು ಗಮನ ಸೆಳೆಯುತ್ತವೆ. ಹರ್ಷ(ಭರತ್ ಭೋಪಣ್ಣ) ಕ್ರಿಕೆಟ್ ಬೆಟ್ಟಿಂಗ್, ಜೂಜಿನ ಮೂಲಕ ಒಮ್ಮೆಲೆ ಹಣ ಮಾಡಲು ಹೊರಡುತ್ತಾನೆ. ಅದರಲ್ಲಿ ವಿಫಲವಾಗಿ ಸಾಲಗಾರನಾಗಿ, ಮನೆಯಲ್ಲಿಯೂ ಮುಖ ತೋರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಮಧ್ಯಂತರ ಬರುತ್ತದೆ, ಅರೇ ಸಿನಿಮಾದ ಇಂಟರ್​ವೆಲ್​ಗೆ ನಾಯಕ ಸತ್ತರೆ ಮುಂದೆ ಸಿನಿಮಾ ಕಥೆ ಏನು ಎಂದುಕೊಳ್ಳಬಹುದು, ಟ್ವಿಸ್ಟ್ ಇರುವುದು ಅಲ್ಲಿಯೇ. ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.
ವಿವೇಕ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದರಿಂದ ಅಲ್ಲಲ್ಲಿ ಕೊಂಚ ಎಡವಿದ್ದಾರೆ ಅನಿಸುತ್ತದೆ. ಯೂತ್ ಆಡಿಯನ್ಸ್ ದೃಷ್ಟಿಯಲ್ಲಿಟ್ಟುಕೊಂಡು ಒಂದಷ್ಟು ದೃಶ್ಯಗಳನ್ನು ಹೆಣೆದಿದ್ದು ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ತಾಯಿ ಮಗನ ಸೆಂಟಿಮೆಂಟ್ , ಅಪ್ಪ ತನ್ನ ಮಗನಿಗಾಗಿ ಪಡುವ ಕಷ್ಟ ಎಲ್ಲವನ್ನು ಉತ್ತಮವಾಗಿ ಸೆರೆ ಹಿಡಿದಿದ್ದಾರೆ. ಈ ರೀತಿಯ ಕಥೆಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಂದಿದೆ. ಆದರೆ ಚಿತ್ರಕಥೆ ಮತ್ತು ಕಲಾವಿದರು ಈ ಕಥೆಯನ್ನು ಕೊಂಚ ಚೆಂದವಾಗಿಸಿದ್ದಾರೆ. ಭರತ್ ಭೋಪಣ್ಣ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗಿರುವ ಮತ್ತೊಬ್ಬ ಚಾಕ್ಲೇಟ್ ಹೀರೋ. ಫೈಟ್ಸ್, ರೊಮ್ಯಾನ್ಸ್, ನಟನೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ನಾಯಕಿ ಸೋನಲ್ ಮೊಂತೆರೋ ಇಡೀ ಸಿನಿಮಾ ಸುಂದರವಾಗಿ ಕಾಣುತ್ತಾರೆ. ನಟನೆಯಲ್ಲಿಯೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಖಳನಾಗಿ ಚಂದ್ರಚೂಡ್ ಖಡಕ್ ಅಭಿನಯ. ರೇಖಾ ಅವರದ್ದು ತಾಯಿಯಾಗಿ ಮಾಗಿದ ಅಭಿನಯ. ತಂದೆಯ ಪಾತ್ರಧಾರಿ ಕೂಡಾ ಘನತೆಯಿಂದ ನಟಿಸಿದ್ದಾರೆ. ಅರ್ಜುನ್ ರಾಮು ಅವರ ಸಂಗೀತದಲ್ಲಿ ಎರಡು ಹಾಡು ಇಷ್ಟವಾಗುತ್ತವೆ. ಕಷ್ಟಪಟ್ಟರೆ ಮಾತ್ರ ಉತ್ತಮವಾದ ಜೀವನ ನಡೆಸಲು ಸಾಧ್ಯ ಎಂಬುದನ್ನು ವಿವೇಕ್ ಎಂಟರ್​ಟೇನ್​ವೆುಂಟ್ ಮೂಲಕ ಹೇಳಲು ಪ್ರಯತ್ನ ಪಟ್ಟಿದ್ದಾರೆ. ಒಂದಷ್ಟು ನ್ಯೂನ್ಯತೆಗಳಿದ್ದರೂ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

ಚಿತ್ರ: ಡೆಮೋ ಪೀಸ್ ನಿರ್ದೇಶನ: ವಿವೇಕ್ ನಿರ್ವಣ: ರೇಖಾ ತಾರಾಗಣ: ಭರತ್ ಭೋಪಣ್ಣ, ಸೋನಲ್, ರೇಖಾ, ಚಕ್ರವರ್ತಿ ಚಂದ್ರಚೂಡ್ ಮತ್ತಿತರರು

| ಹರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net