ಇಲ್ಲಿಯವರೆಗೂ ಯಾರಿಗೂ ಹೇಳಿಲ್ಲ ಇದೇ ಮೊದಲು ಈ ರಹಸ್ಯ ಹಂಚಿಕೊಳ್ಳುತ್ತಿದ್ದೇನೆ ಎಂದ ಹಿರಿಯ ನಟಿ ಊರ್ವಶಿ!

Actress Urvashi
Published on

ಚೆನ್ನೈ: ಹಿರಿಯ ನಟಿ ಊರ್ವಶಿ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಅವರ ಪರಿಚಯ ಕನ್ನಡಿಗರಿಗೂ ಇದೆ. ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​ ಹಾಗೂ ಅಂಬರೀಷ್​ ಸೇರಿದಂತೆ ಮೇರು ನಟರ ಜತೆ ನಟಿಸಿ, ಊರ್ವಶಿ ಸೈ ಎನಿಸಿಕೊಂಡಿದ್ದಾರೆ. ಹಾಸ್ಯ ಪಾತ್ರಗಳ ಮೂಲಕವೂ ಮಿಂಚು ಹರಿಸಿದ್ದಾರೆ.

ಕೇರಳದಲ್ಲಿ ಜನಿಸಿದ ಊರ್ವಶಿ ಅವರು ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಇಂದಿಗೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈವರೆಗೂ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ಐದು ಕೇರಳ ಮತ್ತು ತಮಿಳುನಾಡು ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಫಿಲ್ಮ್​ಫೇರ್​ ಅವಾರ್ಡ್​ ಸಹ ಪಡೆದುಕೊಂಡಿದ್ದಾರೆ. ಊರ್ವಶಿ ತಮ್ಮ 10 ನೇ ವಯಸ್ಸಿನಲ್ಲಿಯೇ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ಈಗ ವಯಸ್ಸಿಗೆ ಸೂಕ್ತವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಊರ್ವಶಿ ಅವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನದಷ್ಟು ವೈಭವಯುತವಾಗಿಲ್ಲ. ಆಗಾಗ ಕೌಟುಂಬಿಕ ಕಲಹಗಳೊಂದಿಗೆ ಸುದ್ದಿಯಾಗಿದ್ದಾರೆ. ಇದೀಗ ತಮಿಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೊದಲ ಮಗು ಜನಿಸಿದಾಗ ಆದಂತಹ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಇದುವರೆಗೂ ಈ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

ಅಷ್ಟಕ್ಕೂ ಊರ್ವಶಿ ಹೇಳಿದ್ದೇನು ಎಂದು ನೋಡುವುದಾದರೆ, ನನಗೆ ಸಿಸೇರಿಯನ್ ಮಾಡಿಸಿಕೊಳ್ಳುವುದೆಂದರೆ ಭಯ ಇತ್ತು. ಹಾಗಾಗಿ ಗರ್ಭಿಣಿಯಾದಾಗ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳುವುದಾಗಿ ಹೇಳಿದ್ದೆ. ನನ್ನ ಚಿಕ್ಕಮ್ಮ ಮತ್ತು ಸಂಬಂಧಿಕರೆಲ್ಲರು ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಗಿ ಹೇಳಿದರು. ಹಿರಿಯರು ಹೇಳಿದ್ದೆಲ್ಲ ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಹತ್ತಿರದ ಆಸ್ಪತ್ರೆಯ ನರ್ಸ್ ಪ್ರತಿದಿನ ಎರಡು ಟಿಟಿ ಇಂಜಕ್ಷನ್​ಗಳನ್ನು ಮಾತ್ರ ತೆಗೆದುಕೊಂಡು ಬರುತ್ತಿದ್ದಳು.

ನಾನು ಪೂರ್ಣ ಸಮಯ ಕೆಲಸ ಮಾಡುತ್ತಿದ್ದೆ. ಹೆರಿಗೆಗೆ ಒಂದು ವಾರದ ಮೊದಲು ಶೂಟಿಂಗ್‌ಗೆ ಹೋಗಿದ್ದೆ. ಡಪ್ಪಂಕುಟ್ಟು ಡ್ಯಾನ್ಸ್ ಶೂಟಿಂಗ್ ಮಾಡುವಾಗ ಪ್ರಭು ಸರ್ ಅವರು ಅಯ್ಯಯ್ಯೋ! ಈ ಹುಡುಗಿ ಯಾಕೆ ಹೀಗೆ ಮಾಡುತ್ತಿದ್ದಾಳೆ?! ನಿಮಗೆ ಎಷ್ಟು ತಿಂಗಳು ಬಾಕಿ ಇದೆ? ಸರಿಯಾಗಿ ಡಾನ್ಸ್​ ಮಾಡು ಎಂದಿದ್ದರು. ಆದರೆ, ದೇವರಿಗೆ ಧನ್ಯವಾದಗಳು. ಕಷ್ಟಪಟ್ಟು ಕೆಲಸ ಮಾಡಿದರೆ ಡೆಲಿವರಿ ಚೆನ್ನಾಗಿ ಆಗುತ್ತದೆ ಎನ್ನುತ್ತಾರೆ. ನಾನು ದೇವರನ್ನು ನಂಬುವವಳು. ನನ್ನ ವೈದ್ಯರು ನನ್ನ ದೇವರು. ಕೆಲಸ ಮಾಡುವುದರಲ್ಲಿ ತಪ್ಪಿಲ್ಲ ಎಂದು ನನ್ನ ಮನೆಯವರು ಹೇಳಿದ್ದರು. ನನ್ನನ್ನು ಬೆದರಿಸಿದ್ದರೆ ಬಹುಶಃ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ನನ್ನ ಮನೆಯಲ್ಲಿ ಯಾರೂ ನನ್ನನ್ನು ಬೆದರಿಸಲಿಲ್ಲ. ಕೆಲಸ ಮಾಡಲು ಉತ್ತೇಜಿಸಿದರು. ಹಾಗಾಗಿ ನಾರ್ಮಲ್ ಡೆಲಿವರಿ ಆಗಿತ್ತು. ಹುಟ್ಟುವಾಗಲೇ ಹೆಣ್ಣು ಹುಟ್ಟಿದ ಸಾರ್ಥಕತೆಯನ್ನು ಅನುಭವಿಸಿದೆ. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ನಾನು ಅಳುತ್ತಲೇ ಇದ್ದೆ ಎಂದು ಊರ್ವಶಿ ಹೇಳಿದ್ದಾರೆ.

ನಾನು ಹೆರಿಗೆ ಸಮಯದಲ್ಲಿ ಅಳುತ್ತಿರಲಿಲ್ಲ, ಆದರೆ ಅವಳು ಹುಟ್ಟಿದ ನಂತರ ನನಗೆ ಅಸುರಕ್ಷಿತ ಭಾವನೆ ಪ್ರಾರಂಭವಾಯಿತು. ಮಗುವನ್ನು ಒಂಟಿಯಾಗಿ ತೊಟ್ಟಿಲಲ್ಲಿ ಹಾಕಲು ನಾನು ಯಾರಿಗೂ ಅವಕಾಶ ನೀಡಲಿಲ್ಲ. ನಾನು ಅವಳನ್ನು ನನ್ನ ಪಕ್ಕದಲ್ಲಿ ಇಡಲು ಕೇಳಿದೆ. ನರ್ಸ್ ಬಂದು ಮಗುವನ್ನು ಒರೆಸಿದರೆ, ಒರಟಾಗಿ ಒರೆಸಬೇಡಿ, ಲಘುವಾಗಿ ಒರೆಸಿ ಎಂದು ಹೇಳುತ್ತಿದ್ದೆ. ನಾನೇ ಮಗುವಿಗೆ ಸ್ನಾನ ಮಾಡಿಸಲು ಬಯಸಿದ್ದೆ. ಶಿಶುಗಳಿಗೆ ಸ್ನಾನ ಮಾಡುವುದನ್ನು ನೋಡಿದ್ದೇನೆ. ಹಾಗಾಗಿ ನಾನೇ ಮಗುವಿಗೆ ಸ್ನಾನ ಮಾಡಿಸುತ್ತಿದ್ದೆ. ಪ್ರತಿ ಚಿತ್ರೀಕರಣಕ್ಕೂ ಮಗುವನ್ನು ಕರೆದುಕೊಂಡು ಹೋಗುತ್ತಿದ್ದೆ. ಇಲ್ಲಿಯವರೆಗೂ ಇದನ್ನು ನಾನು ಯಾರಿಗೂ ಹೇಳಿಲ್ಲ. ಇದೆಲ್ಲವನ್ನೂ ಮೊದಲ ಬಾರಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಊರ್ವಶಿ ತಿಳಿಸಿದರು.

ಅಂದಹಾಗೆ ಮಲಯಾಳಂ ನಟ ಮನೋಜ್ ಕೆ ಜಯನ್ ಅವರನ್ನು 2000ನೇ ಇಸವಿಯಲ್ಲಿ ಊರ್ವಶಿ ಅವರು ವಿವಾಹವಾದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ತೇಜಲಕ್ಷ್ಮಿ ಎಂಬ ಮಗಳಿದ್ದಾಳೆ. ಆರಂಭದಲ್ಲಿ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ 2008ರಲ್ಲಿ ಊರ್ವಶಿ ಮತ್ತು ಮನೋಜ್​ ವಿಚ್ಛೇದನ ಪಡೆದುಕೊಂಡರು. ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಊರ್ವಶಿ, ಮನೋಜ್ ಕೆ ಜಯನ್ ಜೊತೆಗಿನ ವಿಚ್ಛೇದನದ ಹಿಂದಿನ ಕಾರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದರು. ನಮ್ಮ ವಿಚ್ಛೇದನಕ್ಕೆ ಮುಖ್ಯವಾದ ಕಾರಣವೆಂದರೆ ಮದ್ಯದ ಚಟ. ಅವರ ಕುಟುಂಬದ ಎಲ್ಲರೂ ಕುಡಿತಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅವರು ಆರಂಭದಲ್ಲಿ ನನಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದರು. ಪ್ರತಿದಿನ ಮದ್ಯ ಕುಡಿಸುವುದರೊಂದಿಗೆ ನನ್ನನ್ನು ಮದ್ಯ ವ್ಯಸನಿಯಾಗಿಸಿದರು. ಇದು ಅಂತಿಮವಾಗಿ ವಿಚ್ಛೇದನಕ್ಕೆ ಕಾರಣವಾಯಿತು. ಆಗ ನನ್ನ ಮಗಳನ್ನು ನನ್ನಿಂದ ದೂರ ಮಾಡಿದ್ದು ಇದೊಂದೇ ಕಾರಣ ಎಂದರು.

2013ರಲ್ಲಿ 2ನೇ ಮದುವೆ

ವಿಚ್ಛೇದನದ ನಂತರ ಊರ್ವಶಿ ಅವರು 2013 ರಲ್ಲಿ ಚೆನ್ನೈ ಮೂಲದ ಕನ್ಸ್ಟ್ರಕ್ಷನ್ ವ್ಯಾಪಾರದ ಮಾಲೀಕ ಶಿವಪ್ರಸಾದ್ ಅವರನ್ನು ವಿವಾಹವಾದರು. ದಂಪತಿಗೆ ಇಶಾನ್ ಪ್ರಜಾಪತಿ ಎಂಬ ಮಗನಿದ್ದಾನೆ. ಮನೋಜ್ ಕೆ ಜಯನ್ ಅವರು 2011 ರಲ್ಲಿ ಆಶಾ ಎಂಬ ಮಹಿಳೆಯನ್ನು ಮರು-ಮದುವೆ ಮಾಡಿಕೊಂಡರು. ಇವರಿಗೆ 2012 ರಲ್ಲಿ ಜನಿಸಿದ ಅಮೃತ್ ಎಂಬ ಮಗನಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net