`ಸಿಂಗಂ 3' ಮಾಡೋಕೆ ರೋಹಿತ್ ಶೆಟ್ಟಿಗೆ ಕಥೆ ಸಿಕ್ತಂತೆ!

Rohith Shetty and Ajay Devagan
Published on

ಉತ್ತರ ಪ್ರದೇಶದ ಪಾತಕಿ ವಿಕಾಸ್ ದುಬೆ, ಶುಕ್ರವಾರ ಪೊಲೀಸರ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದಾನೆ. ಈ ಬಗ್ಗೆ ಪರ-ವಿರೋಧಗಳು ನಿನ್ನೆಯಿಂದ ಕೇಳಿ ಬರುತ್ತಲೇ ಇದೆ. ಯಾವಾಗ ವಿಕಾಸ್ ದುಬೆ ಎನ್‍ಕೌಂಟರ್ ಸುದ್ದಿಯಾಯಿತೋ, ಆಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಹೆಸರು ಸಿಕ್ಕಾಪಟ್ಟೆ ಓಡಾಡುತ್ತಿದೆ.

ವಿಕಾಸ್ ದುಬೆಗೂ, ರೋಹಿತ್ ಶೆಟ್ಟಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರಬಹುದು. ಇಬ್ಬರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದರೆ, ವಿಕಾಸ್ ದುಬೆಯ ಜೀವನ ಮತ್ತು ಎನ್‍ಕೌಂಟರ್ , ಒಂದು ಥ್ರಿಲ್ಲರ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದ್ದು, ಅಂಥದ್ದೇನಾದರೂ ಚಿತ್ರವಾದರೆ, ಅದನ್ನು ನಿರ್ದೇಶಿಸುವುದಕ್ಕೆ ರೋಹಿತ್ ಶೆಟ್ಟಿ ಸೂಕ್ತ ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿಬರುತ್ತಿದೆ.

ರೋಹಿತ್ ಶೆಟ್ಟಿ, ಹೇಳಿಕೇಳಿ ಬಾಲಿವುಡ್‍ನಲ್ಲಿ ಪೊಲೀಸ್ ಚಿತ್ರಗಳು ನಿರ್ದೇಶಿಸುವುದಕ್ಕೆ ಬಹಳ ಫೇಮಸ್ಸು. ಈ ಹಿಂದೆ ಅಜಯ್ ದೇವಗನ್ ಅಭಿನಯದ `ಸಿಂಗಂ' ಮತ್ತು `ಸಿಂಗಂ 2' ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ಅಕ್ಷಯ್ ಕುಮಾರ್ ಅಭಿನಯದ `ಸೂರ್ಯವಂಶಿ' ಮತ್ತು ರಣವೀರ್ ಸಿಂಗ್ ಅಭಿನಯದ `ಸಿಂಬ' ಚಿತ್ರಗಳನ್ನು ನಿರ್ದೇಶಿಸಿದವರೂ ಅವರೇ. ಇವೆಲ್ಲವೂ ಪೊಲೀಸ್ ಚಿತ್ರಗಳಾಗಿದ್ದು, ನಾಲ್ಕರ ಪೈಕಿ ಮೂರು ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗಿವೆ. ಇನ್ನು ಅಕ್ಷಯ್ ಕುಮಾರ್ ಅಭಿನಯದ `ಸೂರ್ಯವಂಶಿ' ಮಾತ್ರ ಬಿಡುಗಡೆಯಾಗುವುದಕ್ಕಿದೆ.

ಹೀಗಿರುವಾಗಲೇ ವಿಕಾಸ್ ದುಬೆ ಕುರಿತ ಚಿತ್ರವೊಂದನ್ನು ರೋಹಿತ್ ಶೆಟ್ಟಿ ನಿರ್ದೇಶಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನೆಟ್ಟಿಗರು, ಅಜಯ್ ದೇವಗನ್ ಅಭಿನಯದಲ್ಲಿ ಒಂದು ಚಿತ್ರ ಮಾಡುವುದಕ್ಕೆ ಸಲಹೆ ನೀಡಿದ್ದಾರೆ. ಕೆಲವರು, `ಸಿಂಗಂ 3' ಚಿತ್ರಕ್ಕೆ ರೋಹಿತ್ ಶೆಟ್ಟಿಗೆ ಕಥೆ ಸಿಕ್ಕಿತಂತೆ ಎಂದು ಕಾಲೆಳೆದರೆ, ಇನ್ನೂ ಕೆಲವರು ಉತ್ತರ ಪ್ರದೇಶದ ಪೊಲೀಸರಿಗೆ ಎನ್‍ಕೌಂಟರ್ ಐಡಿಯಾ ಕೊಟ್ಟಿದ್ದೇ ರೋಹಿತ್ ಶೆಟ್ಟಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು, ಎನ್‍ಕೌಂಟರ್ ಐಡಿಯಾ ರೋಹಿತ್ ಶೆಟ್ಟಿ ಚಿತ್ರದಿಂದ ನೇರವಾಗಿ ಎತ್ತಿದಂತಿದೆ ಎಂದು ಸಹ ಕಮೆಂಟ್ ಮಾಡಿದ್ದಾರೆ.

ಇದೆಲ್ಲವನ್ನೂ ಕಾಮಿಡಿಯಾಗಿಯೇ ತೆಗೆದುಕೊಂಡಿರುವ ರೋಹಿತ್, ನೆಟ್ಟಿಗರು ತಮ್ಮ ಚಿತ್ರಗಳ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿ ಖುಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net