

ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಚಿತ್ರದ ಟ್ರೈಲರ್, ಬುಧವಾರವಷ್ಟೇ ಬಿಡುಗಡೆಯಾಗಿದ್ದು, ಒಂದೇ ದಿನದ ಅಂತರದಲ್ಲಿ ಅತೀ ಹೆಚ್ಚು ಜನರ ಅವಕೃಪೆಗೆ ಪಾತ್ರವಾದ ದಾಖಲೆ ಬರೆದಿದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಆಲಿಯಾ ಭಟ್, ಜಾಹ್ನವಿ ಕಪೂರ್, ರಣಬೀರ್ ಕಪೂರ್ರಂತಹ ಚಿತ್ರರಂಗದ ಪ್ರಭಾವಿಗಳ ಮಕ್ಕಳಿಂದ, ಹೊರಗಿನಿಂದ ಬರುವ ಪ್ರತಿಭಾವಂತರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ ಎಂಬ ಕಲ್ಪನೆ ಜನರಲ್ಲಿದೆ. ಹಾಗೆ ಅವಕಾಶ ಸಿಗದಿದ್ದ ಕಾರಣಕ್ಕೆ ಸುಶಾಂತ್ರಂತಹ ಪ್ರತಿಭಾವಂತರು ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಅಸಹನೆ ಜನರಲ್ಲಿದೆ. ಆ ಅಸಹನೆ ಇದೀಗ ಡಿಸ್ಲೈಕ್ಗಳ ಮೂಲಕ ಹೊರಬಂದಿದೆ.
ಆಲಿಯಾ ಭಟ್ ಅಭಿನಯದ ಹೊಸ ಚಿತ್ರ ‘ಸಡಕ್ 2’ ಈ ತಿಂಗಳ ಕೊನೆಗೆ ಬಿಡುಗಡೆಯಾಗುತಿದ್ದು, ಇತ್ತೀಚೆಗೆ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಹೊಸ ಅಭಿಯಾನವೇ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಯೂಟ್ಯೂಬ್ನಲ್ಲಿ ಟ್ರೖೆಲರ್ ನೋಡಿದವರು, ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇಷ್ಟವಾದರೆ ಲೈಕ್, ಇಲ್ಲವಾದರೆ ಡಿಸ್ಲೈಕ್ ಬಟನ್ ಒತ್ತುತ್ತಾರೆ. ಇನ್ನೂ ಕೆಲವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ.
‘ಸಡಕ್ 2’ ಟ್ರೈಲರ್ಗೆ ಮೂರೂವರೆ ಲಕ್ಷದಷ್ಟು ಲೈಕ್ ಬಿದ್ದರೆ, 70 ಲಕ್ಷದಷ್ಟು ಡಿಸ್ಲೈಕ್ಗಳು ಸಿಕ್ಕಿವೆ. ಇದು ಆಲಿಯಾ ಭಟ್ ಬಗ್ಗೆ ಜನರಲ್ಲಿ ಎಷ್ಟು ಆಕ್ರೋಶವಿದೆ ಎಂಬುದಕ್ಕೆ ಉದಾಹರಣೆ ಎಂದು ಬಾಲಿವುಡ್ನಲ್ಲಿ ಹೇಳಲಾಗುತ್ತಿದೆ.