ಇದ್ದಿದ್ದು ಇದ್ದಂಗೆ: ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ನಟ ನೀನಾಸಂ ಸತೀಶ್...

Ninasam
Published on

ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್​ನ ವಿಶೇಷ ಅತಿಥಿಯಾಗಿ ಸತೀಶ್ ನೀನಾಸಂ ಭಾಗವಹಿಸಿದ್ದರು. ಕೇಳುಗರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ತಮ್ಮ ಬಾಲ್ಯ, ಚಿತ್ರಜೀವನ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು.

ಸತೀಶ್ ಅನುಭವಗಳು ಇದ್ದಿದ್ದು ಇದ್ದ ಹಾಗೆ...

ರಂಗಭೂಮಿ ಮತ್ತು ಒಂಟಿ ಬದುಕು

10ನೇ ತರಗತಿ ಓದುತ್ತಿದ್ದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿತ್ತು. ಅಕ್ಕಂದಿರ ಮದುವೆ ಸೇರಿ ಅನೇಕ ಜವಾಬ್ದಾರಿಗಳಿದ್ದವು. ಆಗಾಗ ಗಲಾಟೆಗಳೂ ನಡೆಯುತ್ತಿದ್ದವು. ಓದುವ ಕಡೆಗೆ ಆಸಕ್ತಿ ಇಲ್ಲದ ನಾನು, ಮನೆ ಬಿಟ್ಟು ಬೆಂಗಳೂರಿಗೆ ಬಂದೆ. ಯಶವಂತಪುರದ ಗೋಪಾಲ್ ಥಿಯೇಟರ್​ನಲ್ಲಿ ಕೆಲಸ ಮಾಡಿದೆ. ಟಿಕೆಟ್ ಕೊಡುವುದು, ಪಾಪ್​ಕಾರ್ನ್ ಮಾರುವುದು ... ಹೀಗೆ ಒಂದು ವರ್ಷ ಕೆಲಸ ಮಾಡಿದೆ. ಬಳಿಕ ಬಸ್ ತೊಳೆಯುವ ಕೆಲಸ, ಪೀಣ್ಯದ ಗಾರ್ವೆಂಟ್ಸ್​ನಲ್ಲಿ ಆಫೀಸ್ ಬಾಯ್, ಚೌಟ್ರಿಗಳಲ್ಲಿ ಹೂವಿನ ಅಲಂಕಾರ ... ಹೀಗೆ ಹಲವು ಕೆಲಸಗಳನ್ನು ಮಾಡಿ ಅಮ್ಮನ ಜತೆ ಮತ್ತೆ ಊರಿಗೆ ಹೋದೆ. ನೇತಾಜಿ ಸಂಘ ಸೇರಿಕೊಂಡೆ. ಮಂಡ್ಯದ ಜನರೂ ಜತೆಯಾದರು. ಜನದನಿ ಮೂಲಕ ಬೀದಿ ನಾಟಕಗಳಲ್ಲಿ ಭಾಗವಹಿಸಿ ನೀನಾಸಂನಲ್ಲಿ ಎರಡು ವರ್ಷ ನಟನೆ ಕಲಿತೆ. ಎಲ್ಲೆ ಹೋದರೂ ಸಂತೋಷ ಕಳೆದುಕೊಂಡು ಬದುಕಲಿಲ್ಲ.

ಮರೆಯಲಾಗದ ಬಾಲ್ಯ

ನನ್ನದು ಮಂಡ್ಯ ಬಳಿಯ ಯಲಾದಳ್ಳಿ. ಮಿಡಲ್ ಕ್ಲಾಸ್​ಗಿಂತ ಕೆಳಗಿನ ಕುಟುಂಬ ನಮ್ಮದು. ನಾನು ಹುಟ್ಟುವುದಕ್ಕೂ ಮುಂಚೆ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಾನು ಹುಟ್ಟಿದ ಮೇಲೆ ಅವೆಲ್ಲವೂ ಸುಧಾರಿಸಿದವಂತೆ. ಎರಡೂವರೆ ಎಕರೆ ಜಮೀನಿನಲ್ಲಿಯೇ ನಮ್ಮ ಜೀವನ. ಸಂತೋಷ ಸಂಭ್ರಮಕ್ಕೆ ಕಿಂಚಿತ್ತೂ ಕಡಿಮೆ ಇರಲಿಲ್ಲ. ಆಗ ತಾನೇ ಆಂಟೆನಾ ಟಿವಿ ಬಂದಿತ್ತು. ಊರವರೆಲ್ಲ ಒಟ್ಟಿಗೆ ಸಿನಿಮಾ ನೋಡ್ತಿದ್ವಿ. ಈಜು, ಗೋಲಿ ಆಟ, ಬಾವಿ ಒಳಗೆ ಮುಳುಗಿ ಮಣ್ಣು ತರುವುದು, ಮಾವು-ಕಬ್ಬು ತಿಂದಿದ್ದು, ಆಲೆಮನೆ ಬೆಲ್ಲ ಸವಿದ ಖುಷಿ ... ಒಂದಾ ಎರಡಾ ... ಬಾಲ್ಯವನ್ನು ಮನಸ್ಪೂರ್ತಿಯಾಗಿ ಅನುಭವಿಸಿದ್ದೇನೆ.

ಲೂಸಿಯಾ 2 ಬರಲಿದೆ...

ಪವನ್ ಜತೆಗೆ ‘ಲೂಸಿಯಾ 2’ ಸಿನಿಮಾ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಸದ್ಯ ನಾನು ‘ದಸರಾ’, ‘ಮ್ಯಾಟ್ನಿ’ ಸೇರಿ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ. ತಮಿಳು ಪ್ರಾಜೆಕ್ಟ್ ಸಹ ನಡೆ ಯುತ್ತಿದೆ. ಇತ್ತ ಪವನ್ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಬಿಡುವಾದ ಬಳಿಕವಷ್ಟೇ ಈ ಸಿನಿಮಾ ಬಗ್ಗೆ ಮಾತುಕತೆ ನಡೆಯಲಿದೆ.

ಭಟ್ಟರು ಸಿಕ್ಕರು, ನಸೀಬು ಬದಲಾಯಿತು

‘ಪರಮಪದ’ ಧಾರಾವಾಹಿ ಮಾಡುವಾಗ ಯೋಗ ರಾಜ್ ಭಟ್ ಅವರ ಪರಿಚವಾಯಿತು. ಅಲ್ಲಿಂದ ‘ಮನ ಸಾರೆ’, ‘ಡ್ರಾಮಾ’ ಸಿನಿಮಾಗಳಲ್ಲಿ ನಟಿಸಿದೆ. ‘ಲೂಸಿಯಾ’ ಸಿನಿಮಾದಿಂದ ಹೀರೋ ಪಟ್ಟ ಸಿಕ್ಕಿತು. ಒಂದೊಂದಾಗಿ ಸಾಗಿ ಇದೀಗ ಇಲ್ಲಿಗೆ ಬಂದು ನಿಂತಿದೆ. ನಾನು ಸಿನಿಮಾ ಕ್ಷೇತ್ರಕ್ಕೆ ಬಂದಾಗ ಮಂಡ್ಯ ಭಾಷೆ ಇಷ್ಟೊಂದು ಮುಂಚೂಣಿಗೆ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಭಟ್ಟರು ಅನೇಕ ಡೈಲಾಗ್​ಗಳನ್ನು ಬರೆದು ಕೊಟ್ಟು ಸಿನಿಮಾ ಮಾಡಿದ್ದರಿಂದ ಎಲ್ಲ ಭಾಗದ ಜನರೂ ಇಷ್ಟು ಪಟ್ಟು ಹಾರೈಸಿದ್ದಾರೆ. ಮಂಡ್ಯ ಭಾಷೆ ಇರುವ ನನ್ನ ಅಭಿನಯದ ಯಾವುದೇ ಸಿನಿಮಾಗಳು ಕೂಡ ಸೋತಿಲ್ಲ ಎನ್ನುವ ಹೆಮ್ಮೆಯಿದೆ.

ಸೋತಾಗ ಒಬ್ಬಂಟಿಯಾಗಿದ್ದೂ ಇದೆ

ಆರಂಭದಲ್ಲಿ ಪೋಷಕ ಪಾತ್ರ ಮಾಡುತ್ತಿದ್ದೆ. ಹೀರೋ ಅವಕಾಶ ಸಿಕ್ಕಾಗ, ‘ಪೋಷಕ ಪಾತ್ರಗಳೇ ಹೆಚ್ಚೆಚ್ಚು ಬರುತ್ತಿವೆ. ಅದರಲ್ಲಿಯೇ ಮುಂದುವರಿ’ ಎಂಬ ಸಲಹೆಗಳು ಬಂದಿದ್ದವು. ಒಂದು ವೇಳೆ ಸಪೋರ್ಟಿಂಗ್ ಪಾತ್ರ ಮಾಡುತ್ತಲೇ ಬಂದಿದ್ದರೆ, ಇದೀಗ ನಾನು ಇಂಡಸ್ಟ್ರಿಯಲ್ಲಿ ಇರುತ್ತಿರಲಿಲ್ಲ. ಗೆದ್ದಾಗ ಹಿಂದೆ ಬರುವ, ಸೋತಾಗ ಬಿಟ್ಟು ಹೋಗಿರುವ ಜನರನ್ನೂ ನಾನು ಕಂಡಿದ್ದೇನೆ. ಯಶಸ್ಸು ಎಂದರೆ ದುಡ್ಡು, ಮೆಡಲ್ ಕಿರೀಟ ಎನ್ನುವುದಲ್ಲ. ಬದುಕಿನಲ್ಲಿ ಪ್ರತಿನಿತ್ಯ ಸಂತಸದಿಂದ ಇರುವುದೇ ನಿಜವಾದ ಸಕ್ಸಸ್. ಯಶಸ್ಸು ಎಂಬುದು ಸುಮ್ಮನೇ ಸಿಗುವ ಸರಕಲ್ಲ.

ರಾಜಕಾರಣ ನಮಗೆ ಒಗ್ಗುವುದಿಲ್ಲ

ನನಗೆ ರಾಜಕಾರಣದ ಬಗ್ಗೆ ಆಸಕ್ತಿ ಕಡಿಮೆ. ಮೊದಲಿಂದಲೂ ಆ ಬಗ್ಗೆ ಯೋಚಿಸಿದವನಲ್ಲ. ಸಾಮಾಜಿಕ ಕೆಲಸಗಳಲ್ಲಿಯೇ ನಾನು ಮುಂದುರಿಯುತ್ತೇನೆ. ಆ ಕಾರ್ಯಗಳ ಜತೆಯಲ್ಲಿ ಜನರ ಸಂಪರ್ಕದಲ್ಲಿರುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net