

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಟಿ ರಿಯಾ ಚಕ್ರವರ್ತಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ಬಂಧಿಸಿದೆ. ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ 25 ಬಾಲಿವುಡ್ ಕಲಾವಿದರ ಹೆಸರನ್ನು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಎನ್.ಸಿ.ಬಿ ಹೇಳಿದೆ.
ರಿಯಾ ಚಕ್ರವರ್ತಿ ತನಿಖೆ ಸಂದರ್ಭದಲ್ಲಿ ಡ್ರಗ್ಸ್ ದಂಧೆಯಲ್ಲಿ ಬಾಲಿವುಡ್ನ 25 ಜನಪ್ರಿಯ ಕಲಾವಿದರ ಹೆಸರುಗಳನ್ನು ರಿಯಾ ಹೇಳಿದ್ದರಂತೆ, ಈ ಪೈಕಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಹಲವರು ಹೆಸರುಗಳು ಇವೆಯಂತೆ ಎಂಬಂತಹ ಸುದ್ದಿಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲ, ಆ ನಟ-ನಟಿಯರನ್ನು ಎನ್.ಸಿ.ಬಿಯವರು ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಎನ್.ಸಿ.ಬಿಯ ಡೆಪ್ಯುಟಿ ಡೈರೆಕ್ಟರ್ ಕೆ.ಪಿ.ಎಸ್. ಮಲ್ಹೋತ್ರ ಅವರು ಹೇಳಿರುವಂತೆ, ಎನ್.ಸಿ.ಬಿಯವರು ಅಂಥದ್ದೊಂದು ಪಟ್ಟಿಯನ್ನೇ ಸಿದ್ಧ ಮಾಡಿಲ್ಲವಂತೆ. ಹಾಗೆಯೇ, ಸದ್ಯಕ್ಕೆ ಯಾರಲ್ಲೂ ಬಂಧಿಸುವ ಯೋಚನೆ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟ-ನಟಿಯರ ಯಾವುದೇ ಪಟ್ಟಿಯನ್ನು ನಾವು ಮಾಡಿಲ್ಲ. ನಾವು ಮಾಡಿರುವ ಪಟ್ಟಿ ಬರಿ ಪೆಡ್ಲರ್ಗಳದ್ದು. ಅದನ್ನೇ ಬಾಲಿವುಡ್ನವರ ಪಟ್ಟಿ ಎಂದು ಯಾರೋ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ' ಎಂದು ಮಲ್ಹೋತ್ರ ಹೇಳಿಕೊಂಡಿದ್ದಾರೆ.
ಯಾವಾಗ ಡ್ರಗ್ಸ್ ಕೇಸ್ನಲ್ಲಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದವೋ, ಆಗ ಹಲವು ಬಾಲಿವುಡ್ ನಟ-ನಟಿಯರಿಗೆ ಟೆನ್ಶನ್ ಶುರುವಾಗಿದೆ ಎಂದು ಹೇಳಲಾಗಿತ್ತು. ಏಕೆಂದರೆ, ಬಾಲಿವುಡ್ನಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರ ಸಂಖ್ಯೆ ದೊಡ್ಡದಿದ್ದು, ರಾಕುಲ್ ಮತ್ತು ಸಾರಾ ಅವರ ಹೆಸರು ಕೇಳಿ ಬಂದಿರುವುದರಿಂದ, ಇನ್ನಷ್ಟು ಜನ ಸಹ ಬಂಧನಕ್ಕೊಳಗಾಗಬಹುದೆಂಬ ಗುಸುಗುಸು ಇತ್ತು.
ಆದರೆ, ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನವರೇ ತಮ್ಮ ಬಳಿ ಯಾವುದೇ ಪಟ್ಟಿಯಿಲ್ಲ ಎಂದು ಹೇಳಿರುವುದರಿಂದ, ಬಾಲಿವುಡ್ ಕಲಾವಿದರು ಸ್ವಲ್ಪ ನಿಟ್ಟುಸಿರು ಬಿಡಬಹುದೇನೋ?