ಎನ್​ಬಿಕೆ 107 ಪೋಸ್ಟರ್ ಬಿಡುಗಡೆ; ‘ಮಫ್ತಿ’ ರಿಮೇಕ್ ಇರಬಹುದು ಎಂಬ ಗುಮಾನಿ

NBK
Published on

ಬೆಂಗಳೂರು: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಇನ್ನೂ ಹೆಸರಿಡದ ಈ ಚಿತ್ರವು ಬಾಲಕೃಷ್ಣ ಅವರ 107ನೇ ಚಿತ್ರವಾಗಿರುವುದರಿಂದ, ಚಿತ್ರವನ್ನು ಸದ್ಯಕ್ಕೆ ‘ಎನ್​ಬಿಕೆ 107’ ಎಂದು ಕರೆಯಲಾಗುತ್ತಿದೆ. ಈ ಮಧ್ಯೆ, ಬಾಲಕೃಷ್ಣ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರವು ಕನ್ನಡದ ‘ಮಫ್ತಿ’ಯ ರೀಮೇಕ್ ಇರಬಹುದಾ ಎಂಬ ಗುಮಾನಿ ಹಲವರನ್ನು ಕಾಡುತ್ತಿದೆ.

‘ಮಫ್ತಿ’ಯಲ್ಲಿ ಶಿವರಾಜಕುಮಾರ್ ಯಾವ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರೋ, ಬಾಲಕೃಷ್ಣ ಸಹ ಅದೇ ತರಹ ಕರಿ ಅಂಗಿ ಮತ್ತು ಖಾದಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಅದೇ ಗಣಿ, ಎಕ್ಸ್​ಯುವಿ ಕಾರ್, ಬೆಂಗಾವಲು ಪಡೆ ... ಇವೆಲ್ಲ ನೋಡುತ್ತಿದ್ದರೆ ಚಿತ್ರವು ‘ಮಫ್ತಿ’ ರಿಮೇಕ್ ಇರಬಹುದು ಎಂಬ ನಂಬಿಕೆ ಬಲವಾಗಿದೆ.

ಆದರೆ, ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ, ಬರಹಗಾರ ಸಾಯಿ ಮಾಧವ ಬುರಾ› ಜತೆಗೆ ಕೂತು ಚಿತ್ರಕಥೆ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ‘ಮಫ್ತಿ’ ಚಿತ್ರದ ನಿರ್ವಪಕ ಜಯಣ್ಣ ಸಹ ಇದು ರಿಮೇಕ್ ಅಲ್ಲ ಎನ್ನುತ್ತಾರೆ. ‘ಗೆಟಪ್ ನೋಡಿ, ಆ ಚಿತ್ರಕ್ಕೂ ‘ಮಫ್ತಿ’ಗೂ ಏನಾದರೂ ಸಂಬಂಧವಿರಬಹುದಾ? ಎಂಬ ಪ್ರಶ್ನೆ ನಮಗೂ ಇತ್ತು. ವಿಚಾರಿಸಿದಾಗ, ಗೆಟಪ್ ಹೋಲುವುದು ಬಿಟ್ಟರೆ ಮಿಕ್ಕಂತೆ ವಿಭಿನ್ನ ಕಥೆ ಎಂದು ಗೊತ್ತಾಯಿತು’ ಎನ್ನುತ್ತಾರೆ ಜಯಣ್ಣ. ‘ಎನ್​ಬಿಕೆ 107’ ಚಿತ್ರದಲ್ಲಿ ಬಾಲಕೃಷ್ಣಗೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ‘ದುನಿಯಾ’ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net