ಯೂಟ್ಯೂಬರ್​ ಚೊಚ್ಚಲ​ ನಿರ್ದೇಶನದ ಸಿನಿಮಾಗೆ ಲೇಡಿ ಸೂಪರ್​ಸ್ಟಾರ್​ ನಯನತಾರಾ ನಾಯಕಿ!

Nayanathara
Published on

ಚೆನ್ನೈ: ಶಾರುಖ್​ ಖಾನ್​ ನಟನೆಯ ಜವಾನ್​ ಸಿನಿಮಾ ಬಳಿಕ ನಯನತಾರಾ ಅವರ ಮುಂದಿನ ಸಿನಿಮಾ ಯಾವುದಿರಬಹುದು ಅಂತ ಅವರ ಅಭಿಮಾನಿಗಳು ಊಹೆಗೆ ಜಾರಿದ್ದಾರೆ. ಈ ವಿಚಾರವಾಗಿ ಕಾಲಿವುಡ್​ ಗಲ್ಲಿಯೊಳಗೆ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಅದನ್ನು ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಡ್ಯೂಡ್​ ವಿಕ್ಕಿ ಮೊದಲ ಸಿನಿಮಾ

ತಮಿಳುನಾಡಿನ ಪ್ರಖ್ಯಾತ ಯೂಟ್ಯೂಬರ್​ ಡ್ಯೂಡ್​ ವಿಕ್ಕಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು, ಈ ಚಿತ್ರಕ್ಕೆ ನಯನತಾರಾ ಅವರೇ ನಾಯಕಿ ಎಂಬ ಸುದ್ದಿ ಹೊರಬಿದ್ದಿದೆ. ಪ್ರಿನ್ಸ್​ ಪಿಕ್ಚರ್ಸ್​ ಬ್ಯಾನರ್​ ಅಡಿಯಲ್ಲಿ ಲಕ್ಷ್ಮಣ್​ ಕುಮಾರ್​ ಎಂಬುವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ಮಾಪಕರು ಕೂಡ ಖಚಿತಪಡಿಸಿದ್ದಾರೆ.

ಮಹಿಳಾ ಪ್ರಧಾನ ಸಿನಿಮಾ 

ನಯನತಾರಾ ಅವರ ಈ ಹಿಂದಿನ ಅನೇಕ ಸಿನಿಮಾಗಳಂತೆ ಈ ಸಿನಿಮಾ ಕೂಡ ಮಹಿಳಾ ಪ್ರಧಾನ ಸಿನಿಮಾ ಆಗಿರಲಿದ್ದು, ನಯನತಾರಾ ಅವರ ಸುತ್ತ ಸುತ್ತುವ ಥ್ರಿಲ್ಲರ್​ ಕತೆಯಾಗಿರಲಿದೆ. ಜುಲೈ 14ರಂದಿ ಈ ಸಿನಿಮಾ ಸೆಟ್ಟೇರಲಿದೆ. ಆದರೆ, ಈವರೆಗೂ ಈ ಸಿನಿಮಾ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಯೋಗಿ ಬಾಬು ಸಾಥ್​

ಈ ಸಿನಿಮಾದಲ್ಲಿ ಖ್ಯಾತ ಕಾಮೆಡಿಯನ್​ ಯೋಗಿ ಬಾಬು ಕೂಡ ಇರಲಿದ್ದಾರೆ. ನಯನತಾರಾ ಮತ್ತು ಯೋಗಿ ಬಾಬು ಈ ಹಿಂದೆ ಕೊಲಮಾವು ಕೋಕಿಲಾ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೊಂದು ಡಾರ್ಕ್​ ಕಾಮೆಡಿ ಸಿನಿಮಾ ಆಗಿತ್ತು ಮತ್ತು ಸೂಪರ್​ ಹಿಟ್​ ಆಗಿತ್ತು. ಕೊಲಮಾವು ಕೋಕಿಲಾ ಸಿನಿಮಾವನ್ನು ಖ್ಯಾತ ಯುವ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ನೆಲ್ಸನ್​ ಅವರು ಶಿವಕಾರ್ತಿಕೇಯನ್​ ಅಭಿನಯದ ಹಿಟ್​ ಸಿನಿಮಾ ಡಾಕ್ಟರ್​, ವಿಜಯ್​ ಅಭಿನಯದ ಬೀಸ್ಟ್​ ಮತ್ತು ಆಗಸ್ಟ್​ 11ಕ್ಕೆ ಬಿಡುಗಡೆಯಾಗಲಿರುವ ರಜನಿಕಾಂತ್​ ಅಭಿನಯದ ಜೈಲರ್​ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಸೆ. 7ಕ್ಕೆ ಜವಾನ್​ ತೆರೆಗೆ

ಇನ್ನು ನಯನಾತಾರಾ ಅವರು ಆಟ್ಲೀ ನಿರ್ದೇಶನದ ಮತ್ತು ಶಾರುಖ್​ ಖಾನ್​ ನಟನೆಯ ಜವಾನ್​ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಯನಾತಾರಾ ಆರ್ಮಿ ಏಜೆಂಟ್​ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಸಾನ್ಯಾ ಮಲ್ಹೋತ್ರ, ಸುನೀಲ್​ ಗ್ರೋವರ್​ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ. ಶಾರುಖ್​ ಅವರೇ ಈ ಸಿನಿಮಾವನ್ನು ತಮ್ಮ ರೆಡ್​ ಚಿಲ್ಲೀಸ್​ ಎಂಟರ್ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಸೆ. 7ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net