

Nayanthara : ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸು ಗಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಯನತಾರಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.
ಈಗಾಗಲೇ 75 ಚಿತ್ರಗಳನ್ನು ಮುಗಿಸಿರುವ ಈ ಲೇಡಿ ಸೂಪರ್ ಸ್ಟಾರ್ ಇತ್ತೀಚಿನ ದಿನಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಎಷ್ಟೇ ಬಿಜಿ ಇದ್ದರೂ ಮಕ್ಕಳು, ಪತಿಯೊಂದಿಗೆ ಕಾಲ ಕಳೆಯುತ್ತಾರೆ. ಪ್ರತಿ ಸಿನಿಮಾಗಳಲ್ಲಿ ನಯನತಾರಾ ಅವರ ನಟನೆಯನ್ನು ನೋಡಿದ ಅಭಿಮಾನಿಗಳು ಪ್ರೀತಿಯಿಂದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಆದರೆ, ಇನ್ನು ಮುಂದೆ ತಮ್ಮನ್ನು ಹಾಗೆ ಕರೆಯಬೇಡಿ ಎಂದು ನಯನತಾರಾ ವಿನಂತಿಸಿಕೊಂಡಿದ್ದಾರೆ.
ಅಭಿಮಾನಿಗಳು ತುಂಬಾ ಪ್ರೀತಿಯಿಂದ ಲೇಡಿ ಸೂಪರ್ಸ್ಟಾರ್ ಎಂದು ಕರೆಯುತ್ತಿರುವುದು ಸಂತೋಷವಾಗಿದ್ದರೂ, ನಯನತಾರಾ ಎಂಬುದು ಅವರ ಹೃದಯಕ್ಕೆ ಹತ್ತಿರವಾದ ಹೆಸರಾಗಿದೆ. ನಟಿಯಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ಈ ಹೆಸರು ನನ್ನನ್ನು ಪ್ರತಿಬಿಂಬಿಸುತ್ತದೆ ಎಂದು ನಯನಾತಾರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.
ನೀವು ತೋರಿಸುವ ಅಭಿಮಾನಕ್ಕೆ ಧನ್ಯವಾದಗಳು. ನನ್ನ ಜೀವನ ತೆರೆದ ಪುಸ್ತಕ. ನನ್ನ ಯಶಸ್ಸಿನಲ್ಲಿ ಮತ್ತು ಕಷ್ಟದ ಸಮಯದಲ್ಲಿ ನೀವು ನನ್ನ ಜೊತೆಗಿದ್ದೀರಿ. ನೀವು ನನಗೆ ತುಂಬಾ ಪ್ರೀತಿಯಿಂದ ನೀಡಿದ ಲೇಡಿ ಸೂಪರ್ಸ್ಟಾರ್ ಎಂಬ ಬಿರುದಿಗೆ ನಾನು ಋಣಿಯಾಗಿದ್ದೇನೆ. ಆದರೆ, ನನ್ನನ್ನು ನಯನತಾರಾ ಎಂದು ಕರೆದಾಗ ಮಾತ್ರ ನಾನು ಸಂತೋಷಪಡುತ್ತೇನೆ. ಅಂತಹ ಶೀರ್ಷಿಕೆಗಳು ನನಗೆ ಅನಾನುಕೂಲವನ್ನು ಉಂಟುಮಾಡುತ್ತವೆ. ಸಿನಿಮಾ ನಮ್ಮೆಲ್ಲರನ್ನೂ ಒಟ್ಟಿಗೆ ಇಡುತ್ತದೆ. ಅದನ್ನು ಯಾವಾಗಲೂ ಆಚರಿಸೋಣ ಎಂದು ನಯನತಾರಾ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ನಯನತಾರಾ ಅವರು ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಹೆಸರು ‘ರಕ್ಕಾಯಿ’. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸೆಂಥಿಲ್ ನಲ್ಲಸ್ವಾಮಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ರಕ್ಕಾಯಿ’ ಜತೆಗೆ ‘ಮಣ್ಣನ್ಗಟ್ಟಿ 1960’, ‘ತನಿ ಒರುವನ್-2’, ‘ಡಿಯರ್ ಸ್ಟೂಡೆಂಟ್ಸ್’ ಚಿತ್ರಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. (ಏಜೆನ್ಸೀಸ್)