

ಮುಂಬೈ: ನವಾಜುದ್ದೀನ್ ಸಿದ್ಧೀಕಿ ಅಂದ ತಕ್ಷಣ ಅವರ ನಟನೆಯ ಸಿನಿಮಾಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯ ಪಾತ್ರವನ್ನು ನಿಭಾಯಿಸುತ್ತ ವಿಭಿನ್ನತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಇದೀಗ ಮತ್ತೊಂದು ಹೊಸ ಪಾತ್ರಪೋಷಣೆಗೆ ನವಾಜ್ ಸಿದ್ಧರಾಗುತ್ತಿದ್ದಾರೆ.
ಹೌದು, ಇಲ್ಲಿಯವರೆಗೂ ನವಾಜುದ್ದೀನ್ ದೈಹಿಕವಾಗಿ ಬಲಶಾಲಿಯಾಗಿ ಕಾಣಿಸಿಕೊಂಡಿಲ್ಲ. ಇದೀಗ ಉಮೇಶ್ ಶುಕ್ಲಾ ನಿರ್ದೇಶನ ಮಾಡಲಿರುವ ಸಿನಿಮಾಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲಿದ್ದಾರೆ. ಮಾಸ್ ಅವತಾರದಲ್ಲಿ ಬಾಡಿ ಬಿಲ್ಡ್ ಮಾಡಿಕೊಂಡು ಹಿಂದೆಂದೂ ಕಾಣಿಸದ ರೀತಿಯಲ್ಲಿ ಅವರನ್ನು ತೋರಿಸಲಿದ್ದಾರಂತೆ ನಿರ್ದೇಶಕರು.
ಶುಕ್ಲಾ ನಿರ್ದೇಶನದ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನವಾಜುದ್ದೀನ್ ಎದುರಾಗಲಿದ್ದಾರೆ. ಅಷ್ಟೇ ಅಲ್ಲ, ಆ ಪಾತ್ರ ಅಷ್ಟೇ ಖಡಕ್ ಆಗಿರುವುದರಿಂದ, ಆ್ಯಕ್ಷನ್ ಸನ್ನಿವೇಶಗಳೂ ಸಿನಿಮಾದಲ್ಲಿ ಹೆಚ್ಚಿರುವ ಕಾರಣ, ದೇಹವನ್ನು ಹುರಿಗೊಳಿಸಿಕೊಳ್ಳಲಿದ್ದಾರಂತೆ.
ಸದ್ಯಕ್ಕೆ ಕಥೆ ಲಾಕ್ ಆಗಿದ್ದು, ಇತ್ತ ನವಾಜುದ್ದೀನ್ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರಂತೆ. ಪಾತ್ರಕ್ಕಾಗಿ ದೇಹವನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದು, 2021ರ ಮಧ್ಯಭಾಗದಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್)