ನಾಲ್ಕು ವರ್ಷಗಳ ನಂತರ 'ಧರಣಿ'ಯಲ್ಲಿ ಕಾಣಿಸಿಕೊಂಡ ನವೀನ್​ ಶಂಕರ್​!

Dharani Mandala Madhyadolage
Published on

ಬೆಂಗಳೂರು: 'ಗುಳ್ಟೂ' ಎಂಬ ಚಿತ್ರದಲ್ಲಿ ಹೀರೋ ಆಗಿದ್ದ ನವೀನ್​ ಶಂಕರ್​, ಆ ನಂತರ ಅದೆಷ್ಟೋ ಚಿತ್ರಗಳಲ್ಲಿ ನಟಿಸಿದರೂ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ತುರ್ತು ನಿರ್ಗಮನ' ಬಿಟ್ಟರೆ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ನವೀನ್​ ಹೀರೋ ಆಗಿ ನಟಿಸಿರುವ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಚಿತ್ರವು ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ.

'ಧರಣಿ ಮಂಡಲ ಮಧ್ಯದೊಳಗೆ' ಚಿತ್ರವು ಡಿ.2ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ನವೀನ್ ಶಂಕರ್, ಐಶಾನಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ.

ನಮ್ಮ ಸುತ್ತ ಇರುವವರ ಕಥೆಯೇ 'ಧರಣಿ ಮಂಡಲ ಮಧ್ಯದೊಳಗೆ' ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಶಿಕಾರಿಪುರ. ಇದು ಅವರ ಮೊದಲ ಚಿತ್ರವಂತೆ. ಈ ಕುರಿತು ಮಾತನಾಡುವ ಅವರು, 'ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ನಮ್ಮ ಸುತ್ತಮುತ್ತ ಇರುವವರ ಕಥೆಯೇ 'ಧರಣಿ ಮಂಡಲ ಮಧ್ಯದೊಳಗೆ'. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾವಿದು. ಬಾಕ್ಸಿಂಗ್​​ನಲ್ಲಿ ಅಪಾರ ಆಸಕ್ತಿ ಇರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ' ಎನ್ನುತ್ತಾರೆ.

'ಗುಳ್ಟು' ನಂತರ ನವೀನ್ ಕೇಳಿದ ಬಹಳ ವಿಶೇಷ ಕಥೆ ಇದಂತೆ. 'ಚಿತ್ರದಲ್ಲಿ ಆದಿ ಪಾತ್ರವನ್ನು ನಿರ್ವಹಿಸಿದ್ದೇನೆ. ಬಾಕ್ಸಿಂಗ್​​ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಹುಡುಗನ ಪಾತ್ರ. 'ಗುಳ್ಟು' ಸಿನಿಮಾಗಿಂತ ವಿಭಿನ್ನವಾದದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ' ಎನ್ನುತ್ತಾರೆ ನವೀನ್​ ಶಂಕರ್​.

ನಿರ್ದೇಶಕರು ಕ್ರೈಂ ಡ್ರಾಮಾ ಸಿನಿಮಾ ಎಂದಾಗ ಐಶಾನಿ ಸ್ವಲ್ಪ ಯೋಚನೆ ಮಾಡಿದರಂತೆ. ಕಥೆ ಕೇಳಿದಾಗ ಖುಷಿಯಾಯಿತಂತೆ. 'ಕಥೆ ಕೇಳಿ ತುಂಬಾ ಖುಷಿ ಆಯ್ತು. ಇಲ್ಲಿ ನಾನು ಶ್ರೇಯ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಡೋಂಟ್ ಕೇರ್ ಆಟಿಟ್ಯೂಡ್ ಇರುವ ಬೋಲ್ಡ್ ಹುಡುಗಿ ಪಾತ್ರ. ಈ ಚಿತ್ರದ ಭಾಗವಾಗಿರೋದಕ್ಕೆ ತುಂಬಾ ಖುಷಿ ಇದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎನ್ನುತ್ತಾರೆ ಐಶಾನಿ.

'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಮುಂತಾದವರು ಅಭಿನಯಿಸಿದ್ದಾರೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್​ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ ಮತ್ತು ರೋಣದ ಬಕ್ಕೇಶ್ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net