

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ನಟಿಸಿರುವ ಚಿತ್ರ "ಕ್ಷೇತ್ರಪತಿ'. ಶ್ರೀಕಾಂತ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಆ. 18ರಂದು ರಿಲೀಸ್ ಆಗಲಿದ್ದು, ಚಿತ್ರತಂಡ "ಪ್ರತಿ ಕ್ಷೇತ್ರದಲ್ಲೂ ಕ್ಷೇತ್ರಪತಿ' ಹೆಸರಿನಲ್ಲಿ ರಾಜ್ಯಾದ್ಯಂತ ಪ್ರಚಾರ ಆರಂಭಿಸಿದೆ. ಜು.17ರಂದು ಹುಬ್ಬಳ್ಳಿ& ಧಾರವಾಡದಿಂದ ಆರಂಭವಾದ "ಕ್ಷೇತ್ರಪತಿಯ' ಸಂಚಾರ ಈಗಾಗಲೇ ಬೆಳಗಾವಿ, ಸಂಕೇಶ್ವರ, ಬಾಗಲಕೋಟೆ, ಇಳಕಲ್, ಬಿಜಾಪುರ, ಕಲಬುರ್ಗಿ, ರಾಯಚೂರು, ಹೊಸಪೇಟೆ, ದಾವಣಗೆರೆ ಚಿತ್ರದುರ್ಗದಲ್ಲಿ ಪ್ರಚಾರ ಮಾಡಿದೆ. ಆಗಸ್ಟ್1ರಿಂದ 3ರವರೆಗೆ ತುಮಕೂರು, ಹಾಸನ್, ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಆಗಸ್ಟ್ 5ರಂದು ಗದಗ್ನಲ್ಲಿ ಅದ್ದೂರಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಬಳಿಕ ಮಂಡ್ಯ, ರಾಮನಗರ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರಚಾರ ನಡೆಸುವ ಪ್ಲ್ಯಾನ್ ಚಿತ್ರತಂಡದ್ದು.
ಉತ್ತರ ಕರ್ನಾಟಕದ ಇಳಕಲ್ ಮೂಲದವರಾದ ನಾಯಕ ನವೀನ್ ಶಂಕರ್, ಆ ಭಾಗದಲ್ಲಿ ಪ್ರಚಾರ ನಡೆಸಿದ ಖುಷಿಯಲ್ಲಿದ್ದಾರೆ. "ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿರುವುದು ತುಂಬ ಕಡಿಮೆ. ನಾವು ಪ್ರಚಾರಕ್ಕೆ ಹೋದಾಗ ಧಾರವಾಡದಲ್ಲಿ ಒಂದು ಕಿಲೋಮೀಟರ್ ರಸ್ತೆ ಬಂದ್ ಆಗಿತ್ತು. ಜನರನ್ನು ಕಂಟ್ರೋಲ್ ಮಾಡಲು ಆಗಿರಲಿಲ್ಲ. ಹಲವಾರು ಮಂದಿ ಸ್ಕೆಚ್, ೋಟೋ, ಸ್ವೀಟ್ಸ್ ಕೊಟ್ಟರು. ಹುಮ್ನಾಬಾದ್ನಲ್ಲಿ ಕಾಲೇಜ್ ಪ್ರಿನ್ಸಿಪಲ್ ಒಬ್ಬರು ಹೆಚ್ಚು ಕಲಾವಿದರು ಉತ್ತರ ಕರ್ನಾಟಕದ ಕಡೆ ಬರುವುದಿಲ್ಲ. ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಉಚಿತವಾಗಿ ಥಿಯೇಟರ್ಗೆ ನಿಮ್ಮ ಸಿನಿಮಾಗೆ ಕರೆದೊಯ್ಯುತ್ತೇವೆ ಎಂದರು. ಮಳೆಯಿಂದಾಗಿ ಕೆಲವೆಡೆ ರ್ಯಾಲಿ ಕ್ಯಾನ್ಸಲ್ ಮಾಡಬೇಕಾಯಿತು. ಆದರೆ, ರಾಯಚೂರಿನಲ್ಲಿ ಮಳೆಯಲ್ಲೇ ರ್ಯಾಲಿ ಮಾಡಿದೆವು. ಬಿಸಿಲು, ಮಳೆಯಲ್ಲಿ ಸತತ ಓಡಾಟದಿಂದಾಗಿ ಜ್ವರವೂ ಬಂದಿತ್ತು. ಜನರನ್ನು ಭೇಟಿಯಾಗಿ ಸಿಗುವ ಖುಷಿ ಮುಂದೆ ಅದು ಸಣ್ಣದು' ಎಂದು ಸಂತಸ ಹಂಚಿಕೊಳ್ಳುತ್ತಾರೆ ನವೀನ್.
ಕಾಲೇಜುಗಳಷ್ಟೇ ಅಲ್ಲ ಮಠಗಳಿಗೂ ಭೇಟಿ
"ಕ್ಷೇತ್ರಪತಿ' ಚಿತ್ರತಂಡ ಮೊದಲ ಸುತ್ತಿನ ಪ್ರಚಾರದಲ್ಲಿ 26 ಕಾಲೇಜುಗಳಿಗೆ ಭೇಟಿ ನೀಡಿದೆ. ಜತೆಗೆ ಹಲವು ಮಠಗಳಿಗೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದೆ. "ಶರಣಬಸವೇಶ್ವರ ಮಠ, ಕೊಪ್ಪಳ ಮಠ, ರಾವೇಂದ್ರ ಸ್ವಾಮಿ ಮಠ ಸೇರಿ ಕೆಲವು ಮಠಗಳಿಗೂ ಭೇಟಿ ನೀಡಿದೆವು. ಕರ್ನಾಟಕ ಬಿಟ್ಟರೆ ಬೇರೆ ಕಡೆಗಳಲ್ಲಿ ತ್ರಿವಿಧ ದಾಸೋಹಿ ಮಠಗಳು ಇಲ್ಲ. ಹೀಗಾಗಿ ಮಠಗಳಿಗೆ ಭೇಟಿ ನೀಡಿದ ಅನುಭವವೂ ಚೆನ್ನಾಗಿತ್ತು' ಎನ್ನುತ್ತಾರೆ ನವೀನ್.