ಎಸ್​. ನಾರಾಯಣ್​ ಮಗನ ಮೊದಲ ಚಿತ್ರದ ಚಿತ್ರೀಕರಣ ಮುಕ್ತಾಯ

Navami - Final
Published on

ಬೆಂಗಳೂರು: ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪವನ್, 'ನವಮಿ 9.9.1999' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಗೊತ್ತಿರಬಹುದು. ಈ ಹಾರರ್​ ಚಿತ್ರವನ್ನು ಅವರು ಕೆಲವು ತಿಂಗಳುಗಳ ಹಿಂದೆಯೇ ಪ್ರಾರಂಭಿಸಿದ್ದರು. ಆ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ.

ಸಕಲೇಶಪುರ, ಮೈಮಾಪುರ, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ 40ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇದೀಗ ಪೋಸ್ಟ್​​ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿವೆ. ಇದೊಂದು ಹಾರರ್​ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಹಲವು ಅಂಶಗಳು ಈ ಚಿತ್ರದಲ್ಲಿವೆಯಂತೆ.

ಯಶಸ್ ಅಭಿ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆಯನ್ನು ಸಹ ಬರೆದಿದ್ದಾರೆ. ಕೃಷ್ಣ ಗುಡ್ಡೆಮಾರನಹಳ್ಳಿ ಜತೆಗೆ ಸೇರಿಕೊಂಡು ಸಂಭಾಷಣೆಗಳನ್ನೂ ಅವರೇ ರಚಿಸಿದ್ದಾರೆ. ಯಶಸ್ ಅಭಿ ಈ ಹಿಂದೆ 'ಪ್ರಸೆಂಟ್ ಪ್ರಪಂಚ - ಜೀರೋ ಪರ್ಸೆಂಟ್ ಲವ್' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಲ್ಲಿ ‌ನಟಿಸಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿ. ನಿರ್ದೇಶಕ ಎಸ್ ನಾರಾಯಣ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಓಂಪ್ರಕಾಶ್ ರಾವ್, ಹುಚ್ಚ ವೆಂಕಟ್, ಶಂಕರ್ ಅಶ್ವಥ್, ಕುರಿ ಸುನೀಲ್, ನೇಹಾ ಪಾಟೀಲ್, ಕಾರ್ತಿಕ್, ಪವಿತ್ರ, ಅನುಶ್ರೀ, ಸಂದೀಪ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

ಪದ್ಮಸುಂದರಿ ಕ್ರಿಯೇಷನ್ಸ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ಪ್ರದೀಪ್ ಕುಮಾರ್ ಹೆಚ್ ಎಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net