ಹ್ಯಾಕರ್ಸ್​ ಹಿಂದೆ ಬಿದ್ದ 'ನಟ್ವರ್ ಲಾಲ್'; ಟೀಸರ್​ ಬಿಡುಗಡೆ …

Mr Natwarlal
Published on

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ 'ನಂಜುಂಡಿ ಕಲ್ಯಾಣ'ದ ನಂತರ ತನುಷ್​ ಶಿವಣ್ಣ ಸುದ್ದಿಯೇ ಇರಲಿಲ್ಲ. 'ನಟ್ವರ್​ ಲಾಲ್​' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರದ ಬಗ್ಗೆಯೂ ಹೆಚ್ಚು ಮಾಹಿತಿ ಇರಲಿಲ್ಲ. ಈಗ ಆ ಚಿತ್ರವು ಸದ್ದಿಲ್ಲದೆ ಮುಕ್ತಾಯವಾಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಟೀಸರ್​ ಸಹ ಬಿಡುಗಡೆಯಾಗಿದೆ.

ಈ ಹಿಂದೆ 'ಅಯೋಧ್ಯಾಪುರ' ಚಿತ್ರವನ್ನು ನಿರ್ದೇಶಿಸಿದ್ದ ವಿ. ಲವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ''ನಟ್ವರ್ ಲಾಲ್' ಚಿತ್ರವು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಚಿತ್ರವಾಗಿದ್ದು, ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನಿಟ್ಟುಕೊಂಡಿ ಕಥೆ ಮಾಡಿದ್ದೀನಿ. ಉದಾಹರಣೆಗೆ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ ೯೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಮ್ಮ ಜನರನ್ನು ಹ್ಯಾಕರ್ಸ್ ಹೇಗೆಲ್ಲಾ ವಂಚಿಸುತ್ತಾರೆ ಎಂಬುದು ಸಹ ಚಿತ್ರದಲ್ಲಿದೆ. ೨೦೧೯ರಲ್ಲೇ ಚಿತ್ರ ಪ್ರಾರಂಭವಾಗಿದ್ದರೂ ಕೋವಿಡ್ ನಿಂದಾಗಿ ತಡವಾಯಿತು' ಎಂದು ಹೇಳಿದರು.

'ನಟ್ವರ್​ ಲಾಲ್​' ಚಿತ್ರದಲ್ಲಿ ತನುಷ್​​ಗೆ ನಾಯಕಿಯಾಗಿ ಸೋನಾಲ್​ ಮೊಂತೆರೊ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಸಾಮಾಜಿಕ ಹೋರಾಟಗಾರ್ತಿಯಾಗಿ ನಟಿಸಿರುವುದು ವಿಶೇಷ. ಮಿಕ್ಕಂತೆ ರಾಜೇಂದ್ರ ಕಾರಂತ್​, ಹರಿಣಿ, ವಿಜಯ್​ ಚೆಂಡೂರ್​, ಕಾಕ್ರೋಜ್​ ಸುಧಿ, ಯಶ್​ ಶೆಟ್ಟಿ, ರಾಜೇಶ್​ ನಟರಂಗ ಮುಂತಾದವರು ನಟಿಸಿದ್ದಾರೆ.

ಈ ಚಿತ್ರಕ್ಕೆ ಧರ್ಮವಿಶ್ ಸಂಗೀತವಿದೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ತನುಷ್​ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net