ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ; ರಾಜ್ ಉತ್ಸವ

Raj Uthsava
Published on

ಬೆಂಗಳೂರು: ಡಾ. ರಾಜಕುಮಾರ್ ಅಭಿನಯದ ಹಲವು ಚಿತ್ರಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿವೆ. ಈ ಪೈಕಿ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರವೆಂದರೆ ಅದು ‘ಬೇಡರ ಕಣ್ಣಪ್ಪ’. ಆಗಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರ ಪ್ರಶಸ್ತಿಗಳನ್ನು ಪ್ರತಿಷ್ಠಾಪಿಸಿತ್ತು. ಇನ್ನೊಂದು ಕಡೆ, ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ರಾಜಕುಮಾರ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರವು 1954ರಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಅಲ್ಲಿಂದ 1968ರವರೆಗೂ ರಾಜಕುಮಾರ್ ಅಭಿನಯದ ಒಟ್ಟು 13 ಚಿತ್ರಗಳು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿವೆ. ಈ ಪೈಕಿ ‘ಸಂತ ತುಕಾರಾಂ’, ‘ಚಂದವಳ್ಳಿಯ ತೋಟ’, ‘ಸತ್ಯ ಹರಿಶ್ಚಂದ್ರ’, ‘ಸಂಧ್ಯಾ ರಾಗ’, ‘ಬಂಗಾರದ ಹೂವು’ ಮತ್ತು ‘ಮಣ್ಣಿನ ಮಗ’ ಚಿತ್ರಗಳು ರಾಷ್ಟ್ರಪತಿಗಳ ಬೆಳ್ಳಿ ಪದಕ ಪಡೆದರೆ, ‘ಭಕ್ತ ವಿಜಯ’, ‘ಜಗಜ್ಯೋತಿ ಬಸವೇಶ್ವರ’, ‘ಭಕ್ತ ಕನಕದಾಸ’, ‘ಕಿತ್ತೂರು ಚೆನ್ನಮ್ಮ’ ಮತ್ತು ‘ನಂದಾ ದೀಪ’ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ‘ಮದುವೆ ಮಾಡಿ ನೋಡು’ ಚಿತ್ರವು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

1969ರ ನಂತರ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಚಿತ್ರವೆಂದರೆ, ಅದು ‘ಜೀವನ ಚೈತ್ರ’. ಈ ಚಿತ್ರದಲ್ಲಿನ ‘ನಾದಮಯ ಈ ಲೋಕವೆಲ್ಲಾ ...’ ಹಾಡಿನ ಗಾಯನಕ್ಕಾಗಿ ರಾಜಕುಮಾರ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಸಿಕ್ಕಿತ್ತು.

ನಿರೂಪಣೆ: ಚೇತನ್ ನಾಡಿಗೇರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net