

ಬೆಂಗಳೂರು: ಪ್ರಥಮ್ ಚಿತ್ರದ ಕಾರ್ಯಕ್ರಮಗಳೆಂದರೆ, ದೊಡ್ಡ ಸೆಲೆಬ್ರಿಟಿಯೊಬ್ಬರು ಇರಲೇ ಬೇಕು. ಈಗಾಗಲೇ, ಅವರ ಚಿತ್ರಗಳ ಹಲವು ಕಾರ್ಯಕ್ರಮಗಳಲ್ಲಿ ಜನಪ್ರಿಯ ನಟ-ನಟಿಯರು, ರಾಜಕಾರಣಿಗಳು ಬಂದಿದ್ದಾರೆ. ‘ನಟ ಭಯಂಕರ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಆ ಸಾಲಿಗೆ ಶ್ರೀಮುರಳಿ ಸಹ ಸೇರಿದ್ದಾರೆ.
ಶ್ರೀಮುರಳಿ, ಪ್ರಥಮ್ ಅಭಿಮಾನಿಯಂತೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಾಗಂತ ಅವರು ಹೇಳಿಕೊಂಡಿದ್ದಾರೆ. ‘‘ಬಿಗ್ ಬಾಸ್’ನ ಆರಂಭದ ಕಂತುಗಳಲ್ಲಿ ಅವರನ್ನು ನೋಡಿ, ಇದೇನು ಹೀಗೆ ಮಾತನಾಡುತ್ತಾರೆ? ಅಂದುಕೊಂಡೆ. ಕೊನೆಗೆ ನಾನೇ ಅವರ ಅಭಿಮಾನಿಯಾದೆ. ಈಗ ಅವರು ನಟನೆ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಬಂದಿರುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಶ್ರೀಮುರಳಿ.
ಪ್ರಥಮ್ ಚಿತ್ರದ ಬಗ್ಗೆ ಮಾತನಾಡಿದರು. ‘ಅಹಂಕಾರವಿರುವ ಮನುಷ್ಯನೊಬ್ಬ ಇನ್ನೊಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎನ್ನುವುದೇ ಕಥೆ. ಒಬ್ಬ ದಡ್ಡ ಸೂಪರ್ ಸ್ಟಾರ್ ಹಾಗೂ ಅಂಧ ದೆವ್ವದ ಕಥೆ ಕೂಡಾ ಅನ್ನಬಹುದು. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ಮೇ 13ರಂದು ಚಿತ್ರ ತೆರೆ ಕಾಣಲಿದೆ’ ಎನ್ನುತ್ತಾರೆ. ಪ್ರಥಮ್ ಜತೆಗೆ ನಿಹಾರಿಕಾ, ಚಂದನಾ, ಲಹರಿ ವೇಲು, ಸಂಗೀತ ನಿರ್ದೇಶಕ ಪ್ರದ್ಯೋತನ್ ಸಹ ಇದ್ದರು.