ನಮಗಾಗಿ ನಿಂತೋಯ್ತು!

namagagi Film
Published on

ಬೆಂಗಳೂರು: ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ ಅಭಿನಯದ ‘ನಮಗಾಗಿ’ ಚಿತ್ರಕ್ಕೆ ಮತ್ತೆ ಚಾಲನೆ ಸಿಗಲಿದೆ ಎಂದು ನವೆಂಬರ್​ನಲ್ಲಷ್ಟೇ ನಿರ್ದೇಶಕ ರಘುರಾಮ್ ಹೇಳಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ನಿಂತಿದ್ದ ಈ ಚಿತ್ರಕ್ಕೆ ಮರುಚಾಲನೆ ಸಿಗಲಿದೆ ಎಂದು ಕಾಯುತ್ತಿರುವಾಗಲೇ, ಆ ಚಿತ್ರ ಶಾಶ್ವತವಾಗಿ ನಿಂತುಹೋಗಿದೆ ಎಂಬ ಸುದ್ದಿಯನ್ನು ಸ್ವತಃ ನಿರ್ದೇಶಕರೇ ಇದೀಗ ಖಚಿತಪಡಿಸಿದ್ದಾರೆ.

ಹಾಗಾದರೆ, ‘ನಮಗಾಗಿ’ ಸಿನಿಮಾ ಶುರುವಾಗಲ್ವಾ? ಈ ಪ್ರಶ್ನೆಗೆ ಉತ್ತರಿಸುವ ರಘುರಾಮ್ ‘ಇದು ನನ್ನ ಕನಸಿನ ಪ್ರಾಜೆಕ್ಟ್. ಹಾಗಾಗಿ ಮುಂದಿನ ದಿನಗಳಲ್ಲಿ ಒಂದಲ್ಲ ಒಂದು ದಿನ ಈ ಸಿನಿಮಾ ಸಿದ್ಧವಾಗಲಿದೆ. ವಿಜಯ್ ರಾಘವೇಂದ್ರ ಅವರೇ ನಾಯಕನಾಗಿರಲಿದ್ದಾರೆ’ ಎನ್ನುತ್ತಾರೆ. ರಘುರಾಮ್ ನಿರ್ದೇಶಕ

ಹೌದು, 2015ರಲ್ಲಿ ‘ನಮಗಾಗಿ’ ಸಿನಿಮಾ ಸೆಟ್ಟೇರಿತ್ತು. ಒಳ್ಳೆಯ ಫೋಟೋಶೂಟ್ ಮಾಡಿಸಿ ಚಿತ್ರೀಕರಣಕ್ಕೂ ಚಾಲನೆ ಕೊಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಅರ್ಧಕ್ಕೆ ನಿಂತಿತು. ಇನ್ನೇನು ಸಿನಿಮಾ ಟೇಕ್​ಆಫ್ ಆಗಲ್ಲ ಎಂದೇ ಎಲ್ಲೆಡೆ ಸುದ್ದಿ ಹರಿದಾಡಿತ್ತು. ಹೀಗಿರುವಾಗಲೇ ಕಳೆದ ವರ್ಷದ ನವೆಂಬರ್​ನಲ್ಲಿ ‘ನಮಗಾಗಿ’ ಚಿತ್ರವನ್ನು ಮತ್ತೆ ಶುರುಮಾಡುವುದಾಗಿ ರಾಧಿಕಾ ಸಹೋದರ ವಿರಾಜ್ ಹೇಳಿದ್ದರು. ಆಗ ನಿಂತು ಹೋಗಿದ್ದ ಪ್ರಾಜೆಕ್ಟ್​ಗೆ ಮರು ಜೀವಬಂದಂತಾಗಿತ್ತು. ಇದೀಗ ಏಳು ತಿಂಗಳ ನಂತರ ಆ ಸಿನಿಮಾ ಬಗ್ಗೆ ನಿರ್ದೇಶಕರ ಬಳಿ ಕೇಳಿದರೆ, ‘ಅದು ಮುಗಿದ ಅಧ್ಯಾಯ’ ಎನ್ನುತ್ತಾರೆ.

ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಅದನ್ನು ರಘುರಾಮ್ ಅವರೇ ಹೇಳಿಕೊಂಡಿದ್ದಾರೆ ನೋಡಿ. ‘ಈ ಹಿಂದೆ ಎಷ್ಟು ಶೂಟಿಂಗ್ ಆಗಿತ್ತೋ, ಅದೆಲ್ಲವನ್ನೂ ಎಡಿಟ್ ಮಾಡಲಾಗಿತ್ತು. ಆ ದೃಶ್ಯಾವಳಿಗಳನ್ನು ನೋಡಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು ಎಂದು ರಾಧಿಕಾ ಹೇಳಿದರು. ಕಥೆಯನ್ನು ಬದಲಾವಣೆ ಮಾಡಲ್ಲ, ಬದಲಿಗೆ ದೃಶ್ಯಗಳ ಮರು ಚಿತ್ರೀಕರಣ ಮತ್ತು ಚಿತ್ರಕಥೆಯಲ್ಲಿ ಈಗಿನ ನೇಟಿವಿಟಿಗೆ ತಕ್ಕಂತೆ ಸಣ್ಣಪುಟ್ಟ ಚೇಂಜಸ್ ಮಾಡುವ ಬಗ್ಗೆ ಅವರ ಬಳಿ ಹೇಳಿದೆ. ಆಗಿನ ಮಟ್ಟಿಗೆ ಅದಕ್ಕೆ ಸಮ್ಮತಿಸಿದರು. ಅದಾದ ಬಳಿಕ ಚಿತ್ರಕಥೆ ಬಗ್ಗೆ ಚರ್ಚೆಗೆ ಕರೆದರೆ ಬರಲೇ ಇಲ್ಲ. ಸಿನಿಮಾ ಮುಂದುವರಿಸುವುದಾ? ಬೇಡವಾ ಎಂಬುದಕ್ಕೂ ಅವರ ಬಳಿ ಉತ್ತರ ಇರಲಿಲ್ಲ. ಮೊದಲನೆಯದಾಗಿ ಈ ಸಿನಿಮಾ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಹಾಗಾಗಿ ಹೀಗೆಲ್ಲ ಆದರೆ ಸಿನಿಮಾ ಆಗಲು ಸಾಧ್ಯ ಇಲ್ಲ ಎಂದು ನಾನೇ ಹಿಂದೆ ಸರಿದೆ’ ಎನ್ನುತ್ತಾರೆ ರಘುರಾಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net