BAD Review; ಸ್ವಾರ್ಥಿಗಳ ಲೋಕದಲ್ಲಿ ಎಲ್ಲರೂ ಕೆಟ್ಟವರೇ...

ZC
Published on

ಚಿತ್ರ: ಬ್ಯಾಡ್​

ನಿರ್ದೇಶನ: ಪಿ.ಸಿ.ಶೇಖರ್​

ನಿರ್ಮಾಣ: ವೆಂಕಟೇಶ್​ ಗೌಡ

ತಾರಾಗಣ: ನಕುಲ್​ ಗೌಡ, ಅಪೂರ್ವ ಭಾರದ್ವಾಜ್​, ಕಡ್ಡಿಪುಡಿ ಚಂದ್ರು, ಮಾನ್ವಿತಾ ಕಾಮತ್​, ಸಾಯಿಕೃಷ್ಣ, ಅಶ್ವಿನಿ ಪೋಲೆಪಲ್ಲಿ, ಮಂಜುನಾಥ್​ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ವೇದ (ನಕುಲ್​) ಪಾರ್ಟ್​ ಟೈಮ್​ ಮೆಕ್ಯಾನಿಕ್​ ಕಮ್​ ಕೃಷಿಕ, ಫುಲ್​ ಟೈಮ್​ ರೌಡಿ. ಆತ ರೌಡಿಸಂ ಹಾದಿ ಹಿಡಿಯಲೂ ಒಂದು ಕಾರಣವಿದೆ. ಪವಿ (ಮಾನ್ವಿತಾ) ಜತೆಗಿನ "ಪವಿತ್ರ' ಪ್ರೀತಿ ಕಳೆದುಕೊಳ್ಳುವ ಆತ, ಅದಕ್ಕೆ ಕಾರಣರಾದ ಐವರ ವಿರುದ್ಧ ಸಮರ ಸಾರುತ್ತಾನೆ. ರೌಡಿಯಾದರೂ ವೇದ ಹುಂಬನಲ್ಲ. ಗನ್​ ಮತ್ತು ಬೆನ್​ನಿಂದ ಆ ಐವರನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ "ಬ್ಯಾಡ್​'. ಒಬ್ಬನಿಗೆ ಹಣದ ಲಾಲಸೆ, ಮತ್ತೊಬ್ಬನಿಗೆ ಅನೈತಿಕ ಸಂಬಂಧದ ಆಸೆ, ಇನ್ನೊಬ್ಬನಿಗೆ ಅಧಿಕಾರದ ಮೇಲೆ ಮೋಹ, ಒಬ್ಬಾಕೆ ಎರಡು ಮುಖಗಳ ಗೋಮುಖ ವ್ಯಾಘ್ರಳಾದರೆ, ಮತ್ತೊಬ್ಬಳು ಗೋಸುಂಬೆಯನ್ನೂ ಮೀರಿಸುವ ಬಣ್ಣಗಾತಿ... ಇವರೆಲ್ಲರನ್ನೂ ಮೀರಿಸಿ ಹತ್ತು ತಲೆಗಳಿಗೆ ಸಮನಾಗಿ ಮೈಂಡ್​ಗೇಮ್​ ಆಡುವ ರಾವಣನೂ ಇಲ್ಲಿದ್ದಾನೆ. ಹೀಗೆ ಸ್ವಾರ್ಥಿಗಳ ಲೋಕದಲ್ಲಿ ತಮ್ಮ ಗುರಿ ತಲುಪಲು ಬೇರೆಯವರ ಹೆಗಲೇರುವವರ ಮಧ್ಯೆ ಒಬ್ಬ ಪ್ರೇಮಿಯ ವ್ಯಥೆಯಿದೆ. ಆತನ ಪ್ರತಿಕಾರದ ಕಥೆಯಿದೆ.

ಪಿ.ಸಿ.ಶೇಖರ್​ ಕೇವಲ 100 ನಿಮಿಷಗಳಲ್ಲಿ ಗ್ರಿಪ್ಪಿಂಗ್​ ಆ್ಯಕ್ಷನ್​ ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ನಿರೂಪಿಸಲು ಪ್ರಯತ್ನಿಸಿದ್ದಾರೆ. ಕೆಲವೆಡೆ ಜಾಳು ಜಾಳೆನಿಸಿದರೂ, ಬಹುತೇಕ ಸಿನಿಮಾ ಮುಂದೇನು? ಎಂಬ ಕುತೂಹಲ ಮೂಡಿಸುತ್ತಾ, ಪ್ರೇಕ್ಷಕರನ್ನು ಹಿಡಿದಿಡುತ್ತದೆ. ನಾಯಕ ನಕುಲ್​ ಡೈಲಾಗ್​ ಡೆಲಿವರಿಯಲ್ಲಿ ಧ್ರುವ ಸರ್ಜಾ ಕಾಣಿಸುತ್ತಾರೆ. ಮಾನ್ವಿತಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಾದಕ ವ್ಯಸನಿಯಾಗಿ ಒದ್ದಾಡುವ, ಯಾರೇನಾದರೂ ಆಗಲಿ ನಾನೊಬ್ಬಳು ಚೆನ್ನಾಗಿದ್ದರೆ ಸಾಕೆಂದು ಹವಣಿಸುವ ಅನು ಪಾತ್ರದಲ್ಲಿ ಅಪೂರ್ವ ಭಾರದ್ವಾಜ್​ ಗಮನ ಸೆಳೆಯುತ್ತಾರೆ. ಅವರು ಚಿತ್ರದ ಪ್ರಮುಖ ಆಕರ್ಷಣೆ ಎಂದರೂ ಅತಿಶಯವೇನಲ್ಲ. ಮಣಿ ಶರ್ಮಾ ಪಾತ್ರಕ್ಕೆ ಕಡ್ಡಿಪುಡಿ ಚಂದ್ರು ಅವರದೇ ಕಂಠವಿದ್ದಿದ್ದರೆ ಸಿನಿಮಾ ಮತ್ತಷ್ಟು ಮಜವಾಗಿರುತ್ತಿತ್ತು. ಉಳಿದವರು ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತದಲ್ಲಿ "ಮಾತಿಗೂ ಮಾತಿಗೂ' ಕೇಳಲು, ನೋಡಲು ಅಂದವಾಗಿದೆ. ಹೊರಗೆ ಬಣ್ಣ ಬಣ್ಣವಾಗಿ ಕಂಡರೂ, ಮನದೊಳಗಿನ ಹುಳುಕುಗಳನ್ನು ಅನಾವರಣ ಮಾಡುವ ವಿಭಿನ್ನ ಸಸ್ಪೆನ್ಸ್​ ಥ್ರಿಲ್ಲರ್​ "ಬ್ಯಾಡ್​'. ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net