

ಚೆನ್ನೈ: ಕುರುಬನ ರಾಣಿ, ರವಿಮಾಮ ಹಾಗೂ ಹೃದಯವಂತ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಯವಾಗಿರುವ ನಟಿ ನಗ್ಮಾ, 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು.
ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ 2008ರಲ್ಲಿ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು. ಇದಾದ ಬಳಿಕ ರಾಜಕೀಯ ಪ್ರವೇಶ ಮಾಡಿದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ನಗ್ಮಾ ಬಿಜಿಯಾಗಿದ್ದಾರೆ. ನಗ್ಮಾ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ವಯಸ್ಸು 48 ಆದರೂ ಇಂದಿಗೂ ಮದುವೆ ಆಗಿಲ್ಲ. ಆದರೂ ನಗ್ಮಾ ಹೆಸರು ಹಲವರ ಜತೆಯಲ್ಲಿ ಆ ಕಾಲದಲ್ಲಿ ತಳುಕು ಹಾಕಿಕೊಂಡಿತ್ತು.
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ನಗ್ಮಾ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇಷ್ಟೇ ಅಲ್ಲದೆ, ವಿವಾಹಿತ ನಟರಾದ ಶರತ್ ಕುಮಾರ್, ಮನೋಜ್ ತಿವಾರಿ ಮತ್ತು ರವಿ ಕಿಶಾನ್ ಜತೆ ಸಂಬಂಧ ಹೊಂದಿದ್ದಾರೆ ಎಂಬ ವಿಚಾರವೂ ಸಿನಿ ವಲಯದಲ್ಲಿ ಬಹಳ ಚರ್ಚೆಯಾಗಿತ್ತು. ಆದರೆ, ಇಂತಹ ಯಾವುದೇ ಸುದ್ದಿಯ ಬಗ್ಗೆ ನಗ್ಮಾ ಎಲ್ಲಿಯೂ ಮಾತನಾಡಿಲ್ಲ.
ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ನಗ್ಮಾ ತಮ್ಮ ಮದುವೆ ಕುರಿತು ಕೊನೆಗೂ ಮಾತನಾಡಿದ್ದಾರೆ. ವಯಸ್ಸು 48 ಆದ್ರೂ ಇನ್ನೂ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ನಗ್ಮಾ, ನಾನು ಮದುವೆ ಆಗುವುದಿಲ್ಲ ಎಂದು ಯೋಚಿಸಲೇ ಇಲ್ಲ. ತನಗೂ ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದು ನಗ್ಮಾ ಹೇಳಿದ್ದಾರೆ. (ಏಜೆನ್ಸೀಸ್)