ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಅಕ್ಕಿನೇನಿ ನಾಗಾರ್ಜುನ?

Nagarjuna - Final
Published on

ಹೈದರಾಬಾದ್ಟಾ​: ಟಾಲಿವುಡ್​ನ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿಯೊಂದು ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ.

ಅಲ್ಲ, ಮುಖ್ಯಮಂತ್ರಿಯಾಗುವುದಕ್ಕೆ ನಾಗಾರ್ಜುನ ಅವರು ಯಾವುದೇ ರಾಜಕೀಯ ಪಕ್ಷ ಗುರುತಿಸಿಕೊಂಡಿಲ್ಲ, ಯಾವ ಸ್ಥಾನವನ್ನೂ ಅಲಂಕರಿಸಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಸದ್ಯಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಚುನಾವಣೆಗಳು ಸದ್ಯಕ್ಕಿಲ್ಲ. ಹಾಗಿರುವಾಗ ಇಂಥದ್ದೊಂದು ಸುದ್ದಿ ಎಲ್ಲಿಂದ, ಹೇಗೆ ಬಂತು ಎಂಬ ಪ್ರಶ್ನೆ ಬರುವುದು ಸಹಜ.

ನಾಗಾರ್ಜುನ ಅವರು ಮುಖ್ಯಮಂತ್ರಿ ಆಗುತ್ತಿರುವುದು ರಿಯಲ್​ ಲೈಫ್​ನಲ್ಲಲ್ಲ, ರೀಲ್​ ಲೈಫ್​ನಲ್ಲಿ ಎಂಬುದು ಗೊತ್ತಿರಲಿ. ಒಂದೆರೆಡು ವರ್ಷಗಳ ಹಿಂದೆ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್​. ರಾಜಶೇಖರ್​ ರೆಡ್ಡಿ ಅವರ ಕುರಿತಾದ 'ಯಾತ್ರಾ' ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ರಾಜಶೇಖರ್​ ರೆಡ್ಡಿ ಅವರ ಪಾತ್ರದಲ್ಲಿ ಮಲಯಾಳಂ ನಟ ಮಮ್ಮೂಟ್ಟಿ ಕಾಣಿಸಿಕೊಂಡಿದ್ದರು.

ಈಗ ರೆಡ್ಡಿ ಅವರ ಮಗ ಮತ್ತು ಆಂಧ್ರದ ಇಂದಿನ ಮುಖ್ಯಮಂತ್ರಿ ವೈ.ಎಸ್​. ಜಗನ್​ಮೋಹನ್​ ರೆಡ್ಡಿ ಕುರಿತು ಒಂದು ಸಿನಿಮಾ ಆಗುತ್ತಿದೆಯಂತೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಮಾಹಿ ವಿ ರಾಘವ್​, ಈ ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ 'ಯಾತ್ರಾ 2' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದಲ್ಲಿ ಜಗನ್​ಮೋಹನ್​ ಅವರ ಪಾತ್ರಕ್ಕೆ ನಾಗಾರ್ಜುನ ಅವರನ್ನು ಕೇಳಲಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಈ ಸುದ್ದಿ ಸದ್ಯದ ಮಟ್ಟಿಗೆ ಗಾಳಿಸುದ್ದಿಯಾಗಿಯೇ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ನಾಗಾರ್ಜುನ ಅವರು ಒಪ್ಪುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ. ನಿಜಕ್ಕೂ ನಾಗಾರ್ಜುನ ಅವರು ಈ ಪಾತ್ರ ಮಾಡುವುದಕ್ಕೆ ಒಪ್ಪುತ್ತಾರಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net