

ಬೆಂಗಳೂರು: ಧನಂಜಯ್ ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವುದು, ಡಾಲಿ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿರುವುದು ಗೊತ್ತೇ ಇದೆ. ಕೆಲವು ದಿನಗಳ ಹಿಂದೆ ಧನಂಜಯ್, 'ಟಗರು ಪಲ್ಯ' ಎಂಬ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಆದರೆ, ಈ ಚಿತ್ರದ ಹೀರೋ ಯಾರು ಎಂದು ಹೇಳಿರಲಿಲ್ಲ. ಈಗ ಚಿತ್ರಕ್ಕೆ ಧನಂಜಯ್ ಅವರ ಕ್ಲೋಸ್ ಫ್ರೆಂಡ್ ನಾಗಭೂಷಣ್ ನಾಯಕನಾಗಿದ್ದಾರೆ.
‘ಟಗರು ಪಲ್ಯ’ ಮೂಲಕ ಉಮೇಶ್ ಕೆ ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.
ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ಅಭಿನಯಿಸಿದ್ದಾರೆ.
‘ಟಗರು ಪಲ್ಯ’, ನಾಗಭೂಷಣ್ಗೆ ನಾಯಕನಾಗಿ ಮೂರನೇ ಚಿತ್ರ. ಇದಕ್ಕೂ ಮುನ್ನ 'ಇಕ್ಕಟ್ಟ್' ಮತ್ತು 'ಮೇಡ್ ಇನ್ ಚೈನಾ' ಚಿತ್ರಗಳಲ್ಲಿ ಅವರು ಹೀರೋ ಆಗಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಗೆ ನಾಯಕಿ ಯಾರು ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.