

ಚೆನ್ನೈ: ಪ್ರತಿಯೊಬ್ಬರಿಗೂ ತಮ್ಮದೇಯಾದ ನೆಚ್ಚಿನ ನಟ-ನಟಿಯರು ಇರುತ್ತಾರೆ. ಇದಕ್ಕೆ ಕಲಾವಿದರೂ ಕೂಡ ಹೊರತಾಗಿಲ್ಲ. ಸೆಲೆಬ್ರಿಟಿಗಳು ಕೂಡ ತಮ್ಮಿಷ್ಟದ ಕಲಾವಿದರು ಯಾರೆಂಬುದನ್ನು ಅನೇಕ ಸಂದರ್ಭಗಳಲ್ಲಿ ಬಹಿರಂಗಪಡಿಸಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಅವರೊಂದಿಗೆ ನಟಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್ ಕೂಡ ಸ್ಟಾರ್ ಹೀರೋ ಜತೆ ಕೆಲಸ ಮಾಡುವ ಆಸೆಯನ್ನು ಹೊಂದಿದ್ದಾರೆ. ಯಾರು ಆ ಹೀರೋ ಎಂಬುದನ್ನು ನಾವೀಗ ತಿಳಿಯೋಣ.
ನಾಗ್ ಅಶ್ವಿನ್ ನಿರ್ದೇಶನ ಹಾಗೂ ಕೀರ್ತಿ ಸುರೇಶ್ ಅಭಿನಯದ ಮಹಾನಟಿ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಸದ್ಯ ಸುಮನ್ ಕುಮಾರ್ ನಿರ್ದೇಶನದ ‘ರಘು ತಾತ’ ಸಿನಿಮಾದಲ್ಲಿ ಕೀರ್ತಿ, ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ನಲ್ಲಿ ಹಾಸ್ಯದ ಮೂಲಕ ಕೀರ್ತಿ, ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಈ ಚಿತ್ರ ಆಗಸ್ಟ್ 15 ರಂದು ತೆರೆಗೆ ಬರಲಿದೆ.
ಬೇಬಿ ಜಾನ್ ಎಂಬ ಇನ್ನೊಂದು ಸಿನಿಮಾದಲ್ಲಿಯೂ ಕೀರ್ತಿ ಸುರೇಶ್ ಬಿಜಿಯಾಗಿದ್ದಾರೆ. ಸದ್ಯ ರಘು ತಾತಾ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿರುವ ಕೀರ್ತಿ, ಸಾಲು ಸಾಲು ಮಾಧ್ಯಮ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರ ನಡುವೆ ಅವರ ಹೇಳಿಕೆ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕೀರ್ತಿ ಸುರೇಶ್, ಕಾಲಿವುಡ್ ಸ್ಟಾರ್ ಹೀರೋ ಸಿಂಬು ಜತೆ ಕೆಲಸ ಮಾಡಬೇಕೆಂಬುದು ನನ್ನ ಆಸೆ. ಅವರ ಜತೆ ಒಂದು ಸಿನಿಮಾದಲ್ಲಾದರೂ ನಟಿಸಬೇಕು ಅಂತ ಆಸೆ ಇದೆ. ನನಗೆ ಅವರು ತುಂಬಾ ಇಷ್ಟ. ಸಿಂಬು ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದೆರೆಡು ಬಾರಿ ಫೋನಿನಲ್ಲಿಯೂ ಮಾತನಾಡಿದ್ದೆ. ಅವರ ಜೊತೆ ಕೆಲಸ ಮಾಡುವ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.
ಕೀರ್ತಿ ಸುರೇಶ್ ಅವರ ಈ ಹೇಳಿಕೆ ಕೇಳಿ ಸಿಂಬು ಅಭಿಮಾನಿಗಳು ಹಾಗೂ ಕೀರ್ತಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿಂಬು ಕೊನೆಯ ಬಾರಿಗೆ 'ಪತ್ತುತಾಳ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಮಣಿರತ್ನಂ-ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ ನಟಿಸುತ್ತಿದ್ದಾರೆ. ಪ್ರತಿಷ್ಠಿತ 'ಥಗ್ ಲೈಫ್' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಥಗ್ ಲೈಫ್ ಚಿತ್ರದ ಮೇಲೆ ಎಲ್ಲರಲ್ಲೂ ಕುತೂಹಲ ಹೆಚ್ಚಿದೆ. (ಏಜೆನ್ಸೀಸ್)