ಬಾಲಿವುಡ್​ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

wajid-khan 1 JUN 20
Published on

ಮುಂಬೈ: ಬಾಲಿವುಡ್​ನ ಚಿರಪರಿಚಿತ ಸಂಗೀತ ನಿರ್ದೇಶಕ ಜೋಡಿ ಸಾಜಿದ್​-ವಾಜಿದ್ ಪೈಕಿ ವಾಜಿದ್​ ಖಾನ್(42) ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನವಾರ್ತೆ ಬಾಲಿವುಡ್​ಗೆ ಶಾಕ್​ ನೀಡಿದ್ದು, ಟ್ವಿಟರ್​ನಲ್ಲಿ ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿ ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯ ಕಾರಣದಿಂದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಸೋಂಕು ಸೇರಿ ಹಲವು ಸಮಸ್ಯೆಗಳು ಕಾಡಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸಲ್ಮಾನ್ ಖಾನ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಎಂಬ ಸಿನಿಮಾ ಮೂಲಕ 1998ರಲ್ಲಿ ಬಾಲಿವುಡ್​ಗೆ ಪ್ರವೇಶಿಸಿದವರು ಸಾಜಿದ್​-ವಾಜಿದ್​ ಜೋಡಿ. ಆನಂತರದಲ್ಲಿ ಚೋರಿ ಚೋರಿ, ಹಲೋ ಬ್ರದರ್​, ಮುಜ್​ಸೇ ಶಾದಿ ಕರೋಗಿ, ಪಾರ್ಟನರ್​, ವಾಂಟೆಡ್​, ದಬಂಗ್​ (1,2 ಮತ್ತು 3) ಚಿತ್ರಗಳೂ ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

2008ರಲ್ಲಿ ಹಾಡುಗಾರನಾಗಿಯೂ ವಾಜಿದ್​ ವೃತ್ತಿಬದುಕನ್ನು ಮುಂದುವರಿಸಿದ್ದು, ಹುಡ್​ ಹುಡ್ ದಬಂಗ್​, ಜಲ್ವಾ, ಚಿಂತಾ ತಾ ತಾ ಚಿತಾ ಚಿತಾ, ಫೆವಿಕೋಲ್​​ ಸೆ ಮುಂತಾದ ಹಾಡುಗಳು ಜನಪ್ರಿಯವಾಗಿವೆ.

ವಾಜಿದ್ ಖ್ಯಾತಿಯ ನನ್ನ ಸೋದರ ವಾಜಿದ್ ಆಫ್​ ಸಾಜಿದ್​ ಇನ್ನಿಲ್ಲ ಎಂಬ ಸುದ್ದಿ ಕೇಳಿ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುತ್ತಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕೊಡಲಿ. ಸೋದರ ನೀವು ಬೇಗನೆ ಹೋಗಿಬಿಟ್ಟಿರಿ. ನಮಗೆ ಇದು ತುಂಬಲಾರದ ನಷ್ಟ. ಆಘಾತಕ್ಕೆ ಒಳಗಾಗಿ ಕುಸಿದಿದ್ದೇನೆ ಎಂದು ಸಹೋದ್ಯೋಗಿ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್​ ಟ್ವೀಟ್ ಮಾಡಿದ್ದಾರೆ.

ಈ ರೀತಿಯಾಗಿ ಅನೇಕರು ದಿಗ್ಭ್ರಮೆ, ಶಾಕ್​ನಿಂದ ಒಡಗೂಡಿದ ಸಂತಾಪವನ್ನು ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net