

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಸಲಗ’ ಚಿತ್ರದ ಸಕ್ಸಸ್ ಬಳಿಕ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ‘ಭೀಮ’. ‘ಸಲಗ’ ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ‘ಭೀಮ’ನಿಗೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೇ ‘ಬ್ಯಾಡ್ ಬಾಯ್ಸ’, ‘ಐ ಲವ್ ಯೂ ಕಣೇ’ ಹಾಗೂ ‘ನೂರುಪಾಯ್ ಮಿಕ್ಸ್’ ಹಾಡುಗಳು ಬಿಡುಗಡೆಯಾಗಿದ್ದು, ವಿಭಿನ್ನ ರೀತಿಯ ಸೌಂಡಿಂಗ್, ಸಾಹಿತ್ಯದ ಮೂಲಕ ಸಂಗೀಪ್ರಿಯರ ಗಮನ ಸೆಳೆಯುತ್ತಿವೆ. ಹಾಡುಗಳ ಬಗ್ಗೆ ಚರಣ್ ರಾಜ್, ‘ಎಲ್ಲ ಹಾಡುಗಳನ್ನೂ ವಿಜಿ ಸರ್ ಐಡಿಯಾ ಮೇಲೆ ಮಾಡಿದ್ದೇನೆ. ‘ಸೈಕ್ ಸೈಕ್, ಬ್ಯಾಡ್ ಬಾಯ್ಸ’, ‘ಐ ಲವ್ ಯೂ ಕಣೋ, ಐ ಲವ್ ಯೂ ಟೂ ಕಣೇ’ ಅಂತ ಲೈನ್ ನೀಡಿದರು. ಆ ಐಡಿಯಾನ ತೆಗೆದುಕೊಂಡು ಅದಕ್ಕೊಂದು ಸುಂದರ ರೂಪ ನೀಡಲು ಪ್ರಯತ್ನಿಸಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.
ನಾನು ನೋಡಿರದ ಪ್ರಪಂಚ
‘ಸಲಗ’ ಮತ್ತು ‘ಭೀಮ’ ಎರಡೂ ರಾ, ರೌಡಿಸಂ ಕಲ್ಟ್ ಚಿತ್ರಗಳು. ಅಂತಹ ಸಿನಿಮಾಗಳಿಗೆ ವಿಭಿನ್ನ ರೀತಿಯ ಮಾಸ್ ಸಂಗೀತ ನೀಡುವುದು ಸವಾಲಿನ ಕೆಲಸ. ಆ ಬಗ್ಗೆ ಚರಣ್, ‘ಎರಡೂ ಚಿತ್ರಗಳು ಚಾಲೆಂಜಿಂಗ್ ಆಗಿವೆ. ನಾನು ಆ ಪ್ರಪಂಚವನ್ನು ನೋಡಿಲ್ಲ. ನಿರ್ದೇಶಕರು ಏನಂತಾರೆ ಅದನ್ನು ಕೇಳಿಕೊಂಡು, ಕಲ್ಪಿಸಿಕೊಂಡು ಹಾಡು ಮಾಡುವುದು ಸುಲಭವಲ್ಲ. ಅದೆಷ್ಟೇ ಕ್ರೌರ್ಯದಿಂದ ಕೂಡಿದ್ದರೂ ಅಲ್ಲೂ ರೊಮ್ಯಾನ್ಸ್ ಇದೆ, ಅದು ನಾಯಕ, ನಾಯಕಿಯ ರೊಮ್ಯಾನ್ಸ್ ಅಲ್ಲ. ಬದಲಾಗಿ ಆ ಪ್ರಪಂಚದ ರೊಮ್ಯಾನ್ಸ್. ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ಅವರಿಗೆ ಥ್ಯಾಂಕ್ಸ್. ಅವರ ಪ್ರೀತಿ, ಎಲ್ಲ ಪ್ರಶಸ್ತಿಗಳನ್ನೂ ಮೀರಿದ್ದು’ ಎನ್ನುತ್ತಾರೆ.
ಇನ್ನೂ ನಾಲ್ಕು ಹಾಡುಗಳಿವೆ
ಈಗಾಗಲೇ ‘ಭೀಮ’ ಚಿತ್ರದ ಮೂರು ಹಾಡುಗಳು ರಿಲೀಸ್ ಆಗಿದ್ದು, ಇನ್ನೂ ನಾಲ್ಕು ಹಾಡುಗಳು ಬಾಕಿ ಇವೆಯಂತೆ. ‘ಶೀರ್ಷಿಕೆ ಗೀತೆ, ‘ಡೋಂಟ್ ವರಿ ಬೇಬಿ ಚಿನ್ನಮ್ಮ’ ಎಂಬ ಡಾನ್ಸ್ ನಂಬರ್ ಜತೆಗೆ ಎರಡು ಟ್ರ್ಯಾಕ್ಗಳಿವೆ.ಈಗ ಕೇಳಿರುವುದು ಹಿಪ್ಹಾಪ್ ಹಿನ್ನೆಲೆಯ ಹಾಡುಗಳು. ಜಾನಪದ ಹಿನ್ನೆಲೆಯ, ನಮ್ಮ ನೆಲದ ಹಿನ್ನೆಲೆಯ ಹಾಡುಗಳನ್ನು ಕೇಳಬಹುದು. ಜತೆಗೆ ಒಂದು ಪ್ರಮೋಷನಲ್ ಸಾಂಗ್ ಕೂಡ ಪ್ಲ್ಯಾನ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಚರಣ್ ರಾಜ್.
ಇದನ್ನೂ ಓದಿ : ನಟ ಗಣೇಶ್ ಅಭಿನಯಿಸುತ್ತಿರುವ 41ನೇ ಚಿತ್ರಕ್ಕೆ ಇವರೇ ನಾಯಕಿ!
ಮುಂದಿನ ಸಿನಿಮಾಗಳು
‘ಭೀಮ’ ಜತೆಗೆ ಚರಣ್ ರಾಜ್ ದಿನಕರ್ ತೂಗುದೀಪ ನಿರ್ದೇಶಿಸುತ್ತಿರುವ ‘ರಾಯಲ್’ ಚಿತ್ರದ ಹಿನ್ನೆಲೆ ಸಂಗೀತ, ರಂಗಾಯಣ ರಘು ನಟಿಸಿರುವ ‘ಅಜ್ಞಾತವಾಸಿ’, ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ಫ್ಲೈ ಮತ್ತು ಡಾಲಿ ಧನಂಜಯ ಮತ್ತು ರಮ್ಯಾ ನಟಿಸುತ್ತಿರುವ ‘ಉತ್ತರಕಾಂಡ’ ಸಂಗೀತ ಸಂಯೋಜನೆಯಲ್ಲಿ ಬಿಜಿಯಿದ್ದಾರೆ.