ಡಿಸ್ಕೋ ಕಿಂಗ್ ಇನ್ನಿಲ್ಲ: ಅನಾರೋಗ್ಯದಿಂದ ಬಪ್ಪಿ ಲಹರಿ ನಿಧನ

Bappi
Published on

‘ಅಬ್ಬಾ, ಎಷ್ಟೊಂದು ಒಡವೆಗಳು. ಮಂಗಳಸೂತ್ರ ಒಂದು ಬಾಕಿ ಇತ್ತು. ಅದನ್ನೂ ಹಾಕಿಕೊಂಡುಬಿಟ್ಟಿದ್ದರೆ ಬಹಳ ಚೆನ್ನಾಗಿರುತ್ತಿತ್ತು ...’- ಹಾಗಂತ ಹೇಳಿದ್ದರಂತೆ ಬಾಲಿವುಡ್​ನ ಹಿರಿಯ ನಟ ರಾಜ್​ಕುಮಾರ್. ಅವರು ಹೀಗೆ ಹೇಳಿದ್ದು ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದ ಹಿರಿಯ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರ ಬಗ್ಗೆ. ಬಪ್ಪಿ ಲಹರಿ ತಮ್ಮ ಡಿಸ್ಕೋ ಸಂಗೀತಕ್ಕೆ ಎಷ್ಟು ಜನಪ್ರಿಯರೋ, ಚಿನ್ನದ ಮೇಲಿನ ಪ್ರೀತಿಗೂ ಅಷ್ಟೇ ಜನಪ್ರಿಯರಾಗಿದ್ದರು. ಎಲ್ಲೇ ಹೋದರೂ ಮೈತುಂಬಾ ಚಿನ್ನದ ಒಡವೆಗಳನ್ನು ಧರಿಸಿ, ಫ್ಯಾಶನ್ ಬಟ್ಟೆಗಳು ತೊಟ್ಟು, ರಾತ್ರಿ ಹೊತ್ತೂ ಕೂಲಿಂಗ್ ಗ್ಲಾಸ್ ಹಾಕಿಕೊಂಡೇ ಹೋಗುವುದು ಹವ್ಯಾಸವಾಗಿತ್ತು. ಅವರ ಚಿನ್ನದ ಪ್ರೀತಿಯನ್ನು ಕಂಡು ಕೆಲವರು ‘ಗೋಲ್ಡನ್ ಮ್ಯಾನ್ ಆಫ್ ಬಾಲಿವುಡ್’ ಎಂದು ಕರೆಯುತ್ತಿದ್ದುದೂ ಉಂಟಂತೆ.

ಇದು ಬಪ್ಪಿ ಲಹರಿ ಅವರ ಒಂದು ಭಾಗವಷ್ಟೇ. ಬಹುಶಃ ಇಷ್ಟೇ ಆಗಿದ್ದರೆ, ಅವರು ಹೆಚ್ಚು ಸುದ್ದಿಯಾಗುತ್ತಿರಲಿಲ್ಲ, ಜನಪ್ರಿಯರೂ ಆಗುತ್ತಿರಲಿಲ್ಲ. ಬಪ್ಪಿದಾ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಬಪ್ಪಿ ಲಹರಿ ಜನಪ್ರಿಯರಾಗಿದ್ದು ಅವರ ಸಂಗೀತದಿಂದ. ಅದರಲ್ಲೂ ಡಿಸ್ಕೋ ಶೈಲಿಯ ಸಂಗೀತದಿಂದ. ಅವರಿಗೂ ಮುನ್ನ ಬಾಲಿವುಡ್​ನಲ್ಲಿ ಶಂಕರ್ ಜೈಕಿಶನ್, ಆರ್.ಡಿ. ಬರ್ಮನ್ ಮುಂತಾದವರು ಪಾಶ್ಚಿಮಾತ್ಯ ಸಂಗೀತವನ್ನು ಪರಿಚಯಿಸಿದ್ದರು. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ಡಿಸ್ಕೋ ಸಂಗೀತವನ್ನು ಭಾರತದಲ್ಲಿ ಜನಪ್ರಿಯಗೊಳಿಸಿದವರು ಬಪ್ಪಿದಾ ಎಂದರೆ ತಪ್ಪಿಲ್ಲ. ಹಾಗೆ ನೋಡಿದರೆ, ಬಪ್ಪಿ ಲಹರಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದೂ ಡಿಸ್ಕೋ ಸಂಗೀತವೇ. 1973ರಲ್ಲಿ ಬಿಡುಗಡೆಯಾದ ‘ನನ್ಹಾ ಶಿಕಾರಿ’ ಎಂಬ ಚಿತ್ರದ ಮೂಲಕ ಅವರು ಸಂಗೀತ ನಿರ್ದೇಶಕರಾದರೂ, ಜನಪ್ರಿಯರಾಗುವುದಕ್ಕೆ ಹಲವು ವರ್ಷಗಳ ಕಾಲ ಕಾಯಬೇಕಾಯಿತು. ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸ ಬೇಕಾಯಿತು. ಆದರೆ, ಯಾವ ಚಿತ್ರವೂ ಅವರಿಗೆ ದೊಡ್ಡ ಯಶಸ್ಸು ನೀಡಲಿಲ್ಲ. ಈ ಸಂದರ್ಭದಲ್ಲಿ ಬಂದಿದ್ದೇ ‘ಡಿಸ್ಕೋ ಡ್ಯಾನ್ಸರ್’. ಮಿಥುನ್ ಚಕ್ರವರ್ತಿ ಅಭಿನಯದ ಈ ಚಿತ್ರಕ್ಕಾಗಿ ಬಪ್ಪಿದಾ ಸಂಯೋಜಿಸಿದ ‘ಐ ಆಮ್ ಎ ಡಿಸ್ಕೋ ಡ್ಯಾನ್ಸರ್ ...’, ‘ಜಿಮ್ಮಿ ಜಿಮ್ಮಿ ಜಮ್ಮಿ ಆಜಾ ...’ ಮುಂತಾದ ಡಿಸ್ಕೋ ಹಾಡುಗಳು ಅದೆಷ್ಟು ಜನಪ್ರಿಯವಾಯಿತೆಂದರೆ, ಆ ನಂತರ ಅವರೆಂದೂ ಹಿಂದಿರುಗಿ ನೋಡಲಿಲ್ಲ. ಅಲ್ಲಿಂದ ‘ನಮಕ್ ಹಲಾಲ್’, ‘ಶರಾಬಿ’, ‘ಹಿಮ್ಮತ್​ವಾಲಾ’ ಸೇರಿ ಮುಂದಿನ 10 ವರ್ಷಗಳಲ್ಲಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು. ‘ಪಗ್ ಘುಂಘುರು ಬಾಂಧ್’, ‘ರಾತ್ ಬಾಕಿ ಬಾತ್ ಬಾಕಿ’, ‘ಜವಾ-ನೆ-ಜಾನೆಮನ್’, ‘ದೇ ದೇ ಪ್ಯಾರ್ ದೇ’, ‘ಪ್ಯಾರ್ ಬಿನಾ ಚೈನ್ ಕಹಾ ರೇ’, ‘ಇಂಥಹ ಹೋ ಗಯೀ ಮೇರೆ ಪ್ಯಾರ್ ಕೀ’, ‘ನೈನೋ ಮೇ ಸಪ್ನಾ’ ಮುಂತಾದ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದರು. ಕ್ರಮೇಣ 90ರ ದಶಕದ ಕೊನೆಯ ಹೊತ್ತಿಗೆ ಜನರ ಅಭಿರುಚಿ ಬದಲಾಗುತ್ತಿದ್ದಂತೆಯೇ, ಹೊಸಹೊಸ ಸಂಗೀತ ನಿರ್ದೇಶಕರು ಬರುತ್ತಿದ್ದಂತೆ ಬಪ್ಪಿ ಲಹರಿ ಮಂಕಾದರು.

ಕನ್ನಡದಲ್ಲೂ ಬಪ್ಪಿದಾ ಹಾಜರಿ: ಬರೀ ಹಿಂದಿಯಷ್ಟೇ ಅಲ್ಲ, ಕನ್ನಡ, ತಮಿಳು, ತೆಲುಗು, ಬಂಗಾಲಿ ಸೇರಿ ಹಲವು ಭಾಷೆಗಳ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಬಪ್ಪಿ ಲಹರಿ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಹಿರಿಯ ನಟ-ನಿರ್ದೇಶಕ ದ್ವಾರಕೀಶ್. ತಮ್ಮ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಅವರನ್ನು ಕನ್ನಡಕ್ಕೆ ಕರೆತಂದರು. ನಂತರದ ದಿನಗಳಲ್ಲಿ ‘ಕೃಷ್ಣ ನೀ ಬೇಗನೇ ಬಾರೋ’, ‘ಪೊಲೀಸ್ ಮತ್ತು ದಾದಾ’, ‘ಗುರು’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. ಸಂಗೀತ ನಿರ್ದೇಶನದ ಜತೆಗೆ ಗಾಯಕರಾಗಿಯೂ ಹೆಸರು ಮಾಡಿದ್ದ ಬಪ್ಪಿದಾ, ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಲವ್ ಇನ್ ಮಂಡ್ಯ’ ಚಿತ್ರಕ್ಕಾಗಿ ‘ಕರೆಂಟು ಹೋದ ಟೈಮಲಿ’ ಹಾಡನ್ನು ಹಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net