ಊಟ ಕೊಡದಿದ್ರೂ ಪರ್ವಾಗಿಲ್ಲ ಅದು ಮಾತ್ರ ನನಗೆ ಬೇಕೆ ಬೇಕು! ಪೊಲೀಸರ ಮುಂದೆ ನಟ ದರ್ಶನ್‌ ಡಿಮ್ಯಾಂಡ್​

darshan
Published on

ಬೆಂಗಳೂರು: ಇಡೀ ರಾಜ್ಯದಲ್ಲಿ ಇದೀಗ ನಟ ದರ್ಶನ್​ರದ್ದೇ ಚರ್ಚೆ. ಯಾವ ನ್ಯೂಸ್​ ಚಾನೆಲ್​ ಹಾಕಿದ್ರೂ ದರ್ಶನ್​ರದ್ದೇ ಸುದ್ದಿ. ಜನಗಳ ಬಾಯಲ್ಲೂ ದರ್ಶನ್​​ರದ್ದೇ ಮಾತು. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ದರ್ಶನ್​ ಬಂಧನವಾಗಿರುವುದು. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್​ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಅಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ.

ಈ ಪ್ರಕರಣದಲ್ಲಿ ದರ್ಶನ್​ ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್​ ಎ2 ಆರೋಪಿಯಾಗಿದ್ದಾರೆ. ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್​ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ಇತ್ತಿಚೆಗಷ್ಟೇ ದರ್ಶನ್​ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್​ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಇದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರ ಗೌಡ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ರಾಜ್ಯವೇ ಒಂದು ಕ್ಷಣ ಶಾಕ್​ ಆಗುವಂತಹ ಸುದ್ದಿ ಹೊರಬಿದ್ದಿದೆ.

ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ದರ್ಶನ್ ಅರೆಸ್ಟ್ ಆಗಿದ್ದು ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ​ ಕಸ್ಟಡಿಯಲ್ಲಿದ್ದಾರೆ. ನಿನ್ನೆಯಷ್ಟೇ ಮೈಸೂರಿನಿಂದ ಬೆಂಗಳೂರಿಗೆ ಕರೆತಂದು ದರ್ಶನ್​ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಮೆಡಿಕಲ್​ ಟೆಸ್ಟ್​ ಮಾಡಿದ ಬಳಿಕ ಕೋರ್ಟ್​ ಮುಂದೆ ಹಾಜರು ಮಾಡಲಾಯಿತು. ಎಲ್ಲ ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ ಕೊಲೆ ನಡೆದ ಸ್ಥಳದ ಮಹಜರು ಸೇರಿದಂತೆ ಇನ್ನಿತರ ಪ್ರಕ್ರಿಯೆ ನಡೆಯುತ್ತಿದೆ.

ಇದರ ನಡುವೆ ದರ್ಶನ್​ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ. ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ತೀವ್ರ ಆತಂಕದಲ್ಲಿರುವ ದರ್ಶನ್​, ಮಂಗಳವಾರ (ಜೂನ್​ 11) ಮಧ್ಯಾಹ್ನದಿಂದ ಏನು ತಿಂದಿಲ್ಲ ಮತ್ತು ತೀವ್ರ ಆತಂಕದಿಂದಲೇ ಪೊಲೀಸ್​ ಠಾಣೆಯಲ್ಲಿ ಸಮಯ ಕಳೆದಿರುವುದಾಗಿ ತಿಳಿದುಬಂದಿದೆ. ನಿನ್ನೆ ನಿಂಬೆಹಣ್ಣಿನ ಜ್ಯೂಸ್​ ಕುಡಿದಿದ್ದ ದರ್ಶನ್​, ರಾತ್ರಿ ಊಟ ಕೊಟ್ಟರು ತಿನ್ನುವುದಕ್ಕೆ ಆಗುತ್ತಿಲ್ಲ ಎಂದು ಊಟ ನಿರಾಕರಿಸಿದ್ದರು. ಅವರಿಷ್ಟದ ಬಿರಿಯಾಗಿ ತಂದುಕೊಟ್ಟರು ತಿನ್ನದೆ ಮೌನಕ್ಕೆ ಜಾರಿದ್ದರು. ಬಿರಿಯಾನಿ ಬದಲಾಗಿ, ಮಜ್ಜಿಗೆ ಮತ್ತು ಬಿಸ್ಕೆಟ್​ ತಿಂದು ಕಾಲ ಕಳೆದಿದ್ದಾರೆ ಎನ್ನಲಾಗಿದೆ.

ಇನ್ನು ಊಟಕ್ಕಿಂತ ಹೆಚ್ಚಾಗಿ ದರ್ಶನ್​ ಸಿಗರೇಟ್​ಗೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ತಿಂಡಿ ಕೊಡದಿದ್ರೂ ಪರ್ವಾಗಿಲ್ಲ. ಸಿಗರೇಟ್‌ ಮಾತ್ರ ಕೊಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಇದಕ್ಕೆ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಸ್ಟೇಷನ್​ನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ ಅಂತ ಪೊಲೀಸರು ದರ್ಶನ್‌ಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿನ್ನೆಯಿಂದ ಜ್ಯೂಸ್ ಮತ್ತು ಮಜ್ಜಿಗೆಯಲ್ಲಿಯೇ ದರ್ಶನ್​ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಊಟ ಮಾಡಲು ನಿರಾಕರಿಸುತ್ತಿದ್ದಾರೆ. ಒಟ್ಟಾರೆ ದರ್ಶನ್ ಅರೆಸ್ಟ್ ಆದಾಗಿನಿಂದ ತುಂಬಾ ಒತ್ತಡದಲ್ಲಿದ್ದಾರಂತೆ.

ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ.

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.

ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net