ನಾನು ಸಾಯೋದಕ್ಕೇ ಯಾಕೆ ಕಾಯ್ತಿದ್ದಾರೆ ... ಹಿರಿಯ ನಟಿ ಮಮ್ತಾಜ್ ಅಳಲು

Mumtaz Final
Published on

ಮಮ್ತಾಜ್ ಹೋಗಿಬಿಟ್ಟರಂತೆ!

ಇಂಥದ್ದೊಂದು ಸುದ್ದಿ ಎರಡು ದಿನಗಳಿಂದ ಕೇಳಿ ಬರುತ್ತಿದೆ. ಈಗಷ್ಟೇ ಅಲ್ಲ, ಕಳೆದ ವರ್ಷವೂ ಇದೇ ಆಗಿತ್ತು. ಬಾಲಿವುಡ್‌ನ ಒಂದು ಕಾಲದ ಜನಪ್ರಿಯ ನಟಿ ಮಮ್ತಾಜ್ ನಿಧನ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಅದೂ ಈಗಲೂ ಮುಂದುವರೆದಿದ್ದು, ಈ ಬಗ್ಗೆ ಮಮ್ತಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಮ್ತಾಜ್ ಇದೀಗ ಲಂಡನ್‌ನಲ್ಲಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜತೆಗೆ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಭಾರತಕ್ಕೆ ಬರುವುದು ಕಡಿಮೆಯಾದರೂ, ಅವರು ಬಣ್ಣ ಹಚ್ಚದೇ ಹಲವು ವರ್ಷಗಳಾದರೂ, ಈಗಲೂ ಭಾರತದಲ್ಲಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲ, ಮಮ್ತಾಜ್ ಅವರ ಚಿತ್ರಗಳು ಮತ್ತು ಅಭಿನಯವನ್ನು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಂಥವರಿಗೆಲ್ಲಾ ಮಮ್ತಾಜ್ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಆಘಾತ ತಂದಿದೆ.

ಈ ಕುರಿತು ಮಾತನಾಡಿರುವ ಮಮ್ತಾಜ್. ‘ನಾನು ಬದುಕಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ. ಲಾಕ್‌ಡೌನ್‌ನಿಂದಾಗಿ ಮನೆಯವರೆಲ್ಲಾ ಒಟ್ಟಿಗೇ ಇರುವಂತಾಗಿದೆ. ಈ ಮಧ್ಯೆ, ನಾನು ಇನ್ನಿಲ್ಲ ಎಂಬ ಸುದ್ದಿ ಹರಡಿರುವುದನ್ನು ಕೇಳಿದೆ. ಬಹಳಷ್ಟು ಜನ ಇದೇ ವಿಷಯವಾಗಿ ನನಗೆ ೆನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ನಾನು ಸಾಯೋದಕ್ಕೇ ಯಾಕೆ ಕೆಲವರು ಕಾಯ್ತಿದ್ದಾರೆ ಅಂತ ಅರ್ಥ ಆಗುತ್ತಿಲ್ಲ. ಸಮಯ ಬಂದಾಗ, ನಾನೇ ಹೊರಟು ಹೋಗುತ್ತೇನೆ’ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ ಮಮ್ತಾಜ್.

‘ಅಲ್ಲ, ನಾನು ಸತ್ತಾಗ, ಸಹಜವಾಗಿಯೇ ಸುದ್ದಿಯಾಗುತ್ತದೆ. ಅದನ್ನು ಮುಚ್ಚಿಟ್ಟು ಯಾರಿಗೇನು ಪ್ರಯೋಜನ? ನಾನು ಸತ್ತಾಗ, ನನ್ನ ಮನೆಯವರೇ ಅದನ್ನು ಎಲ್ಲರಿಗೂ ತಿಳಿಸುತ್ತಾರೆ. ಸಾವು ಎಲ್ಲರಿಗೂ ಒಂದಲ್ಲ ಒಂದು ದಿನ ಬರುತ್ತದೆ. ಅದರಿಂದ ನಾನು ಹೊರತಲ್ಲ. ಒಂದಲ್ಲ ಒಂದು ದಿನ ನಾನು ಹೋಗಲೇ ಬೇಕು. ಆದರೆ, ವರ್ಷಕ್ಕೆ ಒಂದೋ, ಎರಡೋ ಬಾರಿ ಯಾಕೆ ಈ ರೀತಿ ಸುಳ್ಳು ಸುದ್ದಿ ಹಬ್ಬತ್ತದೋ ಗೊತ್ತಿಲ್ಲ’ ಎಂದಿದ್ದಾರೆ ಮಮ್ತಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net