ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ; ಮಲ್ಟಿಪ್ಲೆಕ್ಸ್ ಕಂಪನಿಗಳಿಗೆ ಶುರುವಾಯ್ತು ತಳಮಳ!

Inox
Published on

ಕರೊನಾ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಜಗತ್ತಿನ ಆರ್ಥಿಕ ವ್ಯವಸ್ಥೆಯೇ ತಲೆಕೆಳಗಾಗಿದೆ. ಅದರಲ್ಲಿ ಸಿನಿಮಾ ಕ್ಷೇತ್ರವೂ ಹೊರತಲ್ಲ. ಏಕಪರದೆ ಸಿನಿಮಾಮಂದಿರಗಳ ಪಾಡು ಒಂದೆಡೆಯಾದರೆ, ಮಲ್ಟಿಪ್ಲೆಕ್ಸ್​ಗಳದ್ದು ಮತ್ತೊಂದು ಗೋಳು. ಹೀಗಿರುವಾಗ ಸಿನಿಮಾ ಪ್ರದರ್ಶನ ಇಲ್ಲದ ಈ ಹೊತ್ತಲ್ಲಿ ಮಲ್ಟಿಫ್ಲೆಕ್ಸ್​ನವರು ಕೊಂಚ ಗರಂ ಆಗಿದ್ದಾರೆ. ಅಕ್ಕೆ ಕಾರಣ ಓಟಿಟಿ ವೇದಿಕೆ!

ಹೌದು, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ಎರಡ್ಮೂರು ತಿಂಗಳ ಕಾಲ ಅದು ಮುಂದುವರೆದರೂ ಅಚ್ಚರಿ ಇಲ್ಲ. ಹೀಗಿರುವಾಗಲೇ ಸಿನಿಮಾ ನಿರ್ಮಾಪಕರು ನಿರ್ಮಾಣವಾದ ಚಿತ್ರಗಳನ್ನು ಬಿಡುಗಡೆ ಮಾಡಲು ತಯಾರಾಗುತ್ತಿದ್ದಾರೆ. ಅದಕ್ಕವರು ಓಟಿಟಿ ಫ್ಲಾಟ್​ಪಾರ್ಮ್​ಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆಗಳ ಈ ನಿರ್ಧಾರ ಮಲ್ಟಿಪ್ಲೆಕ್ಸ್​ ಕಂಪನಿಗಳನ್ನು ಗೊಂದಲಕ್ಕೆ ನೂಕಿದೆ. ಬಾಲಿವುಡ್​ನಲ್ಲಿ ತಯಾರಾದ ಅಮಿತಾಬ್ ಬಚ್ಚನ್​ ನಟನೆಯ ಗುಲಾಬ್​​ ಸಿತಾಬೋ ಸಿನಿಮಾ, ಐನಾಕ್ಸ್ ಜತೆಗಿನ ಒಪ್ಪಂದವನ್ನು ಬದಿಗಿಟ್ಟು, ನೇರವಾಗಿ ಓಟಿಟಿ ವೇದಿಕೆಗೆ ಬಂದಿದ್ದೇ ಐನಾಕ್ಸ್ ಸಂಸ್ಥೆಯ ಕಣ್ಣು ಕೆಂಪಾಗಿಸಿದೆ.

ಭಾರತದಲ್ಲಿ ಮಲ್ಟಿಪ್ಲೆಕ್ಸ್​ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಐನಾಕ್ಸ್ ಸಂಸ್ಥೆ ಈ ಸಂಬಂಧ ಕೆಲ ಪ್ರೊಡಕ್ಷನ್​ ಹೌಸ್​ಗಳಿಗೆ ಬಹಿರಂಗ ಪತ್ರ ಬರೆದು, ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

‘ಸಿನಿಮಾ ಮತ್ತು ಮಲ್ಟಿಪ್ಲೆಕ್ಸ್​ ಎರಡೂ ಒಂದೇ ನಾಣ್ಯದ ಮುಖಗಳು. ನೀವು ಕಂಟೆಂಟ್​ ಕೊಟ್ಟರೆ ಅದರ ಪ್ರದರ್ಶನ ನಮ್ಮ ಜವಾಬ್ದಾರಿ. ಒಂದು ರೀತಿ ಪಾಲುದಾರರಿದ್ದಂತೆ. ಆದರೆ, ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಪರದೆಯಲ್ಲಿ ಚಿತ್ರಪ್ರದರ್ಶನ ಬದಿಗಿಟ್ಟು, ಓಟಿಟಿ ಫ್ಲಾಟ್​ಫಾರ್ಮ್​ ಮೊರೆ ಹೋಗುವ ನಿರ್ಧಾರ ನಿಜಕ್ಕೂ ಬೇಸರದಾಯಕ. ಹಾಗಾಗಿ ದಯಮಾಡಿ, ಸಿನಿಮಾ ಮಂದಿರದಲ್ಲಿಯೇ ಚಿತ್ರಪ್ರದರ್ಶನ ಕಾಣಲಿ, ಅದನ್ನೇ ಮುಂದುವರೆಸಿ’ ಎಂದು ಚಿತ್ರ ನಿರ್ಮಾಣ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net