

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಂ' ಬಿಡುಗಡೆಯ ವಿಷಯವಾಗಿ ಚಿತ್ರಮಂದಿರಗಳು ಮತ್ತು ನಿರ್ಮಾಪಕರು ನಡುವೆ ಜಟಾಪಟಿ ಶುರುವಾಗಿದೆ. ಒಂದು ಪಕ್ಷ ನಿರ್ಮಾಪಕರೇನಾದರೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಚಿತ್ರವನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಮಲ್ಟಿಪ್ಲೆಕ್ಸ್ನವರು ಪಟ್ಟು ಹಿಡಿದು ಕುಳಿತಿದ್ದಾರೆ.
ವಿಷಯವೇನೆಂದರೆ, ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಂ' ಚಿತ್ರವನ್ನು ಜುಲೈ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದನ್ನು ಕೇಳಿ ಅಕ್ಷಯ್ ಕುಮಾರ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಅದಾಗಿ ಎರಡೇ ದಿನಗಳಿಗೆ, ಚಿತ್ರವನ್ನು ಅಮೇಜಾನ್ ಪ್ರೈಮ್ನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎರಡು ವಾರಗಳ ನಂತರ ಚಿತ್ರವನ್ನು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ, ಆ. 10 ಅಥವಾ 14ರಂದು ಅಮೇಜಾನ್ ಪ್ರೈಮ್ನಲ್ಲಿ ಚಿತ್ರ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಚಿತ್ರತಂಡದ ಈ ನಡೆ, ಮಲ್ಟಿಪ್ಲೆಕ್ಸ್ನವರನ್ನು ಕೆರಳಿಸಿದೆ. ಬಿಡುಗಡೆ ದಿನಾಂಕ ಘೋಷಿಸಿ, ಎರಡೇ ವಾರಗಳಲ್ಲಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಮಲ್ಟಿಪ್ಲೆಕ್ಸ್ಗಳಿಗೆ ಯಾರು ಬರುತ್ತಾರೆ? ಎಂಬುದು ಚಿತ್ರಮಂದಿರದವರ ಪ್ರಶ್ನೆ. ಇದು ಸಹಜ. ಏಕೆಂದರೆ, ಓಟಿಟಿಯಲ್ಲಿ ಚಿತ್ರ ಸಿಗುತ್ತದೆ ಎಂದು ಗೊತ್ತಾದರೆ, ಬಹಳಷ್ಟು ಜನ ಮಲ್ಟಿಪ್ಲೆಕ್ಸ್ಗಳಿಗೆ ಬರದೆ, ಓಟಿಟಿಯಲ್ಲಿ ಬಿಡುಗಡೆಯಾದ ನಂತರವೇ ಚಿತ್ರವನ್ನು ಪುಕ್ಕಟ್ಟೆಯಾಗಿ ನೋಡುತ್ತಾರೆ. ಇದರಿಂದ ಸಹಜವಾಗಿ ಮಲ್ಟಿಪ್ಲೆಕ್ಸ್ನವರಿಗೆ ಲಾಸ್ ಆಗುವುದರಿಂದ, ಅವರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿ ಒಂದು ತಿಂಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡಿ, ಒಂದು ಪಕ್ಷ ಓಟಿಟಿಯಲ್ಲೂ ಬಿಡುಗಡೆ ಮಾಡುವುದಾದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
‘ಬೆಲ್ ಬಾಟಂ’ ಚಿತ್ರವನ್ನು ರಂಜಿತ್ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್ ಕಥೆಯಾಗಿದ್ದು ಅಕ್ಷಯ್ ಕುಮಾರ್ ಜತೆಗೆ ವಾಣಿ ಕಪೂರ್, ಲಾರಾ ದತ್ತ, ಹುಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.