ಬಹುಭಾಷೆಯಲ್ಲಿ ಕಂಬಳ ಓಟಗಾರ; ಸಿನಿಮಾದಲ್ಲಿ ಶ್ರೀನಿವಾಸ ಗೌಡ ಸಕ್ರಿಯ

Kambala
Published on

ಮಂಗಳೂರು: ಕಂಬಳ ಕ್ರೀಡೆಯಲ್ಲಿ ವೇಗದ ಓಟಗಾರನೆಂಬ ಹೆಗ್ಗಳಿಕೆ ಪಾತ್ರನಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಅಶ್ವತ್ಥಪುರದ ಶ್ರೀನಿವಾಸ ಗೌಡ, ಇದೀಗ ನಟನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. 2017ರಲ್ಲಿ ತೆರೆಕಂಡ ‘ಬಾಹುಬಲಿ 2’ ತೆಲುಗು ಸಿನಿಮಾದ ದೃಶ್ಯವೊಂದರಲ್ಲಿ ಮೊದಲ ಬಾರಿಗೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡಿದ್ದ ಶ್ರೀನಿವಾಸ ಗೌಡ, ಸದ್ಯ ಕಂಬಳ ಕಥಾಹಂದರ ಹೊಂದಿರುವ ‘ಬಿರ್ದ್​ದ ಕಂಬಳ’ ಎಂಬ ತುಳು ಹಾಗೂ ‘ವೀರ ಕಂಬಳ’ ಎಂಬ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿರುವ, ಅರುಣ್ ರೈ ತೋಡಾರು ನಿರ್ವಣದ ‘ವೀರ ಕಂಬಳ’ ಚಿತ್ರಕ್ಕೆ ತುಳು ಸಿನಿಮಾ-ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್​ಬೈಲ್ ಚಿತ್ರಕಥೆ ಬರೆದಿದ್ದಾರೆ. ‘ಬಾಹುಬಲಿ 2’ ಚಿತ್ರದ ಗೂಳಿ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡ ಶ್ರೀನಿವಾಸ ಗೌಡ, ಆ ಸಮಯದಲ್ಲಿ ಕಂಬಳದ ಎ-ಗ್ರೇಡ್ ಓಟಗಾರರಾಗಿದ್ದರು. ಗೂಳಿ ಓಡಿಸುವ ದೃಶ್ಯಕ್ಕೆ ತರಬೇತಿ ನೀಡಲು ಆಯ್ಕೆಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 10 ಓಟಗಾರರಲ್ಲಿ ಅವರೂ ಒಬ್ಬರು. ಗೂಳಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಪಳಗಿಸುತ್ತಿದ್ದ ಗೌಡರನ್ನೇ ಆ ದೃಶ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇನ್ನು ಚಿತ್ರೀಕರಣ ಹಂತದಲ್ಲಿರುವ ‘ಬಿರ್ದ್​ದ ಕಂಬಳ’, ‘ವೀರ ಕಂಬಳ’ ಸಿನಿಮಾದಲ್ಲೂ ಶ್ರೀನಿವಾಸ ಗೌಡರು ಕಂಬಳ ಓಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net