ಹಳೇ ಮುಗಿಲು, ಹೊಸ ಪೇಟೆ: ಮುಗಿಲ್ ಪೇಟೆ ಸಿನಿಮಾ ವಿಮರ್ಶೆ

Mugil Pet
Published on
  • ಚಿತ್ರ: ಮುಗಿಲ್​ಪೇಟೆ
  • ನಿರ್ದೇಶನ: ಭರತ್ ನಾವುಂದ
  • ನಿರ್ಮಾಣ: ಮೋತಿ ಮೂವಿ ಮೇಕರ್ಸ್
  • ತಾರಾಗಣ: ಮನುರಂಜನ್, ಖಯಾದು ಲೋಹರ್, ತಾರಾ, ಅವಿನಾಶ್, ರಂಗಾಯಣ ರಘು, ಸಾಧುಕೋಕಿಲ,ರಿಷಿ ಮುಂತಾದವರು

| ಮಂಜು ಕೊಟಗುಣಸಿ ಬೆಂಗಳೂರು

ಮೊದಲ ಸೆಳೆತ, ಪ್ರೇಮ ನಿವೇದನೆ, ಸುತ್ತಾಟ, ಮುನಿಸು ಕೊನೆಗೆ ಕ್ಷಮಿಸು ... ಈ ಎಲ್ಲದರ ಮಿಶ್ರಣವಾಗಿ ಮೂಡಿಬಂದಿದೆ ‘ಮುಗಿಲ್​ಪೇಟೆ’ ಸಿನಿಮಾ. ಇಲ್ಲಿ ಕಲರ್​ಫುಲ್ ಪ್ರೇಮಕಥೆ ಇದೆ. ಒಂದಷ್ಟು ಟ್ವಿಸ್ಟುಗಳು, ಮತ್ತೊಂದಿಷ್ಟು ಫೈಟ್​ಗಳೂ ಪೇಟೆಯನ್ನು ಸುತ್ತುವರಿದಿವೆ. ಭಾವನೆಗಳ ಬಗ್ಗೆಯೂ ಚಿತ್ರ ಮಾತನಾಡುತ್ತದೆ. ಆಗಾಗ ‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ ಹಾಡುಗಳೂ ಗುನುಗುತ್ತವೆ. ಇದು ಮನುರಂಜನ್ ‘ಮುಗಿಲ್​ಪೇಟೆ’ಯಲ್ಲಿನ ಸಮ್ಮಿಶ್ರ ಸರಕುಗಳು.

ರವಿಚಂದ್ರನ್ ಅಂದ ತಕ್ಷಣ ಅಲ್ಲಿ ಪ್ರೇಮಕಥೆ ಇರುವ ಸಿನಿಮಾಗಳೇ ಕಣ್ಣಮುಂದೆ ಹಾದುಹೋಗುತ್ತವೆ. ಇದೀಗ ಅಪ್ಪನ ಹಾದಿಯಲ್ಲಿಯೇ ಮಗ ಪ್ರೇಕ್ಷಕನನ್ನು ಪ್ರೀತಿಯ ‘ಮುಗಿಲ್​ಪೇಟೆ’ಗೆ ಕರೆದೊಯ್ದಿದ್ದಾರೆ. ಆ ಪೇಟೆಯಲ್ಲಿ ಎಲ್ಲವೂ ಕಲರ್​ಫುಲ್. ನಾಯಕನ ಎರಡೆರಡು ಇಂಟ್ರೊಡಕ್ಷನ್ ಎಂಟ್ರಿ, ಕಿವಿಗಿಂಪು ಹಾಡುಗಳು, ಒಂದೆರಡು ಸಾಹಸ ದೃಶ್ಯಗಳ ಝುಲಕ್, ಕಚಗುಳಿ ಇಡುವ ಹಾಸ್ಯ, ಇನ್ನೇನು ಮಧ್ಯಂತರ ಬಂತು ಎನ್ನುತ್ತಿದ್ದಂತೆ ಎದುರಾಗುವ ಒಂದು ತಿರುವು... ಹೀಗೆ ಮುಗಿಯುತ್ತದೆ ಚಿತ್ರದ ಮೊದಲಾರ್ಧ.

ಹಾಗಾದರೆ ಕಥೆ ಏನು? ಇಬ್ಬರು ಪ್ರೇಮಿಗಳ ನಡುವೆ ಮುನಿಸು, ಅನುಮಾನ ಭುಗಿಲೆದ್ದಾಗ ಏನೆಲ್ಲ ಘಟಿಸುತ್ತದೆ? ಕೊನೆಗೆ ಅದು ಬಂದು ಎಲ್ಲಿಗೆ ನಿಲ್ಲುತ್ತದೆ ಎಂಬುದೇ ಈ ಸಿನಿಮಾದ ಒಂದೆಳೆ. ಪ್ರೀತಿಗಿಂತ ಸಂಬಂಧವೂ ಮುಖ್ಯ ಎಂಬ ಅಂಶವನ್ನೂ ನಿರ್ದೇಶಕ ಭರತ್ ನಾವುಂದ ಸಿನಿಮಾದಲ್ಲಿ ಬಿತ್ತಿದ್ದಾರೆ. ಅದ್ಯಾವುದೂ ಹೊಸದಲ್ಲದಿದ್ದರೂ ಹಳೆಯದೆಂದು ಅನಿಸುವುದಿಲ್ಲ! ಈ ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಮನುರಂಜನ್ ಅವರದ್ದು ‘ಮುಗಿಲ್​ಪೇಟೆ’ಯಲ್ಲಿ ಮಾಗಿದ ಅಭಿನಯ. ಕೇವಲ ಅದೊಂದಷ್ಟೇ ಅಲ್ಲ ಸಾಹಸ ದೃಶ್ಯಗಳಲ್ಲಿಯೂ ಅವರನ್ನು ರಗಡ್ ಆಗಿ ತೋರಿಸಿದ್ದಾರೆ ಸಾಹಸ ನಿರ್ದೇಶಕ ರವಿವರ್ಮ. ಆಗಾಗ ಒಂದು ಕೋನದಿಂದ ಥೇಟ್ ಅಪ್ಪನಂತೇ ಹಾವಭಾವ ತೋರಿಸುತ್ತಾರೆ ಮನುರಂಜನ್. ಅಪ್ಪನ ಸಿನಿಮಾ ಟೈಟಲ್​ಗಳೂ ಪದೇಪದೆ ಕೇಳಿಸುತ್ತವೆ. ಇನ್ನು ನಾಯಕಿ ಖಯಾದು ಲೋಹರ್ ಪಾತ್ರ ಬೇಡಿದ್ದನ್ನು ಅಚ್ಚುಕಟ್ಟಾಗಿ ನೀಡಿದ್ದಾರೆ. ಸಾಧು ಕೋಕಿಲ ಅವರ ಹತ್ತು ಹಲವು ವೇಷಗಳು ನಗು ಉಕ್ಕಿಸುತ್ತವೆ. ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡಿದ್ದರೂ, ಕುಣಿತಕ್ಕೆ ಆಸ್ಪದ ಇಲ್ಲ. ‘ತಾರೀಫು ಮಾಡಲು ...’ ಹಾಡು ಕಿವಿಗಿಂಪು ನೀಡುವುದರ ಜತೆಗೆ ಅದರ ಮೇಕಿಂಗ್ ಗಮನಸೆಳೆಯುತ್ತದೆ. ಇದೆಲ್ಲವನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ಮುಗಿಲ್​ಪೇಟೆಯೇ ಮಿಸ್ಸಿಂಗ್! ಅದರ ಅಂದ, ಅಲ್ಲಿನ ಸೊಗಡನ್ನೇ ನಿರ್ದೇಶಕರು ಸಿನಿಮಾದಲ್ಲಿ ತೋರಿಸದಿರುವುದು ವಿಪರ್ಯಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net