

Mughal E Azam : ಸಿನಿಮಾ ರಂಗದಲ್ಲಿ ಈಗ ನೂರಾರು ಕೋಟಿ ರೂಪಾಯಿ ಹೂಡಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಸುಮಾರು ಅರವತ್ತೈದು ವರ್ಷಗಳ ಹಿಂದೆಯೇ ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರವೊಂದು ಬಿಡುಗಡೆಯಾಯಿತು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈ ದೃಶ್ಯ ಮಹಾಕಾವ್ಯವು ಕೇವಲ ಒಂದು ಚಿತ್ರವಾಗಿರಲಿಲ್ಲ, ಒಂದು ಚಳುವಳಿಯೇ ಆಗಿತ್ತು. ಬರೋಬ್ಬರಿ 16 ವರ್ಷಗಳ ಕಾಲ ನಡೆದ ಈ ಸಿನಿಮಾದ ನಿರ್ಮಾಣವು ಭಾರತೀಯ ಚಲನಚಿತ್ರೋದ್ಯಮದಲ್ಲಿ ಒಂದು ಹೆಗ್ಗುರುತಾಯಿತು. ಹಿಂದಿ ಚಿತ್ರದ ಒಟ್ಟು ವೆಚ್ಚ ಸರಾಸರಿ 10 ಲಕ್ಷ ರೂ.ಗಳಿಗಿಂತ ಕಡಿಮೆಯಿದ್ದ ಸಮಯದಲ್ಲಿ, ಕೇವಲ ಒಂದು ಹಾಡಿಗೆ 1 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈ ಚಿತ್ರದ ನಿರ್ಮಾಪಕನ ಧೈರ್ಯವನ್ನು ಕಂಡು ಎಲ್ಲರು ಹುಬ್ಬೇರಿಸಿದ್ದರು. ಅದಕ್ಕಾಗಿಯೇ ಇಂದಿಗೂ ಆ ಚಿತ್ರದ ಬಗ್ಗೆ ಜನರು ಮಾತನಾಡುತ್ತಾರೆ.
ಅಂದಹಾಗೆ, ಆ ಚಿತ್ರದ ಹೆಸರು ಮುಘಲ್-ಎ-ಅಜಮ್. ಈ ಚಿತ್ರವನ್ನು ಕೆ. ಆಸಿಫ್ ನಿರ್ಮಿಸಿ, ನಿರ್ದೇಶಿಸಿದರು. ಈ ಸಿನಿಮಾವನ್ನು ಅನೇಕ ಸಣ್ಣ ದ್ವೀಪಗಳನ್ನು ಖರೀದಿಸಬಹುದಾದ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ವ್ಯಾಪಾರ ವಿಶ್ಲೇಷಕರೊಬ್ಬರು ಬಣ್ಣಿಸಿದ್ದರು. ಈ ಕ್ಲಾಸಿಕ್ ಭಾರತೀಯ ಸಿನಿಮಾದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲ ಹಾಗೂ ದುರ್ಗಾ ಖೋಟೆ ಅವರಂತಹ ಆ ಕಾಲದ ಉನ್ನತ ಕಲಾವಿದರನ್ನು ಒಳಗೊಂಡಿತ್ತು. 1960 ರಲ್ಲಿ ಬಿಡುಗಡೆಯಾದ ಮುಘಲ್-ಎ-ಅಜಮ್ ಸಿನಿಮಾ, ಮೊಘಲ್ ರಾಜಮನೆತನದ ಭವ್ಯತೆ ಮತ್ತು ತಂತ್ರಗಳನ್ನು ಮಾತ್ರ ತೋರಿಸದೇ ಪ್ರೇಮ ಕತೆಯನ್ನು ಪ್ರದರ್ಶಿಸಿತು.
ಅಂದಿನ ಸುಂದರ ನಟಿ ಮಧುಬಾಲಾ ಅವರ ಕುರಿತಾದ ಮತ್ತು ಇಂದಿಗೂ ಪ್ರೇಮಿಗಳಿಗೆ ಧೈರ್ಯವನ್ನು ಸಾರುವ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಹಾಡಿನ ಚಿತ್ರೀಕರಣಕ್ಕೆ 1 ಕೋಟಿ ರೂಪಾಯಿ ವೆಚ್ಚವಾಯಿತು. ಈ ಹಾಡನ್ನು ಲಾಹೋರ್ ಕೋಟೆಯಲ್ಲಿರುವ ಶೀಶ್ ಮಹಲ್‌ನ ಪ್ರತಿಕೃತಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡಿನ ಸೆಟ್ ನಿರ್ಮಾಣಕ್ಕೆ ಸುಮಾರು ಎರಡು ವರ್ಷಗಳು ಬೇಕಾಯಿತು, ಇದು ಇಂದಿನ ದೊಡ್ಡ ಚಿತ್ರದ ನಿರ್ಮಾಣಕ್ಕೆ ಹೋಲಿಸಬಹುದು.
ಅಧಿಕಾರದಲ್ಲಿ ಸಂಚಲನಾತ್ಮಕ ಆದೇಶಗಳನ್ನು ಕಾರ್ಯಗತಗೊಳಿಸುವ ಚಕ್ರವರ್ತಿ ಅಕ್ಬರ್ ಆಗಿ ಪೃಥ್ವಿರಾಜ್ ಕಪೂರ್, ರಾಜಕೀಯ ಉದ್ವಿಗ್ನತೆ ಮತ್ತು ಅರಮನೆಯ ಒಳಸಂಚುಗಳ ನಡುವೆ ಬಂಡಾಯಗಾರ ಪ್ರೇಮ ಅನ್ವೇಷಕನಾಗಿ ಬದಲಾದ ರಾಜಕುಮಾರ ಸಲೀಂ ಆಗಿ ದಿಲೀಪ್ ಕುಮಾರ್ ಮತ್ತು ಅವನ ಪ್ರೇಮಿ ಅನಾರ್ಕಲಿಯಾಗಿ ಮಧುಬಾಲಾ ನಟಿಸಿದರು. ಈ ಚಿತ್ರದಲ್ಲಿ, ಪ್ರೇಕ್ಷಕರು ಅನಾರ್ಕಲಿಯ ಪ್ರೇಮಕಥೆಯನ್ನು ನೋಡುವುದಲ್ಲದೆ, ಕಲೆ ಮತ್ತು ನೋವಿನ ನಡುವಿನ ನಿಜ ಜೀವನದ ಯುದ್ಧವನ್ನು ಸಹ ಅನುಭವಿಸಿದರು.
ಈ ಚಿತ್ರದ ನಿರ್ಮಾಣ ಸಮಯ ದೀರ್ಘವಾಗಲು ಕಾರಣವೆಂದರೆ ಚಿತ್ರೀಕರಣದಲ್ಲಿ ಆಗಾಗ್ಗೆ ಅಡಚಣೆಗಳು ಉಂಟಾಗಿದ್ದು. ನಿರ್ಮಾಣಕ್ಕೆ ತಾತ್ಕಾಲಿಕ ವಿರಾಮಗಳ ಜೊತೆಗೆ, ಇದನ್ನು ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಮಾಡಲಾಗಿದೆ ಎಂಬ ಅಂಶ, ಪಾತ್ರವರ್ಗದಲ್ಲಿನ ಬದಲಾವಣೆಗಳು (ಸಲೀಂ ಪಾತ್ರದಲ್ಲಿ ನಟಿಸಿದ ಮೊದಲ ನಟನನ್ನು ದಿಲೀಪ್ ಕುಮಾರ್ ಬದಲಾಯಿಸಿದರು) ಮತ್ತು ಆರ್ಥಿಕ ಸಮಸ್ಯೆಗಳಂತಹ ಅನೇಕ ಘಟನೆಗಳಿಂದ ಚಿತ್ರೀಕರಣ ವಿಳಂಬವಾಯಿತು. ಇದೆಲ್ಲದರ ಹೊರತಾಗಿಯೂ, ಕೆ. ಆಸಿಫ್ ತಮ್ಮ ಎಲ್ಲಾ ಶಕ್ತಿಯನ್ನು ಕೇಂದ್ರೀಕರಿಸಿ ಮುಘಲ್-ಎ-ಆಜಮ್ ಅನ್ನು ಚಲನಚಿತ್ರದಂತೆ ಅಲ್ಲ, ಯಜ್ಞದಂತೆ ಮಾಡಿದರು. ಪ್ರತಿಯೊಂದು ದೃಶ್ಯವೂ ಒಂದು ಮೇರುಕೃತಿಯಂತೆ ಭಾಸವಾಗುತ್ತದೆ.
ಇದಕ್ಕೆ ಒಂದು ಉದಾಹರಣೆಯೆಂದರೆ ಕೆ. ಆಸಿಫ್ ಅವರು ಯುದ್ಧದ ದೃಶ್ಯಗಳಿಗೆ ನಿಜವಾದ ಸೈನಿಕರನ್ನು ಬಳಸುವಂತೆ ಭಾರತೀಯ ಸೇನೆಯನ್ನು ಮನವೊಲಿಸಲು ಮಾಡಿದ ಪ್ರಯತ್ನ. 1960, ಆಗಸ್ಟ್ 5ರಂದು ಬಿಡುಗಡೆಯಾದ ಮುಘಲ್-ಎ-ಅಜಮ್, 11 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಗ್ರಹಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತು. ಹಣದುಬ್ಬರ, ಪ್ರೇಕ್ಷಕರ ಸಾಂದ್ರತೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡರೆ, ಮುಘಲ್-ಎ-ಅಜಮ್ ಇಲ್ಲಿಯವರೆಗಿನ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರವಾಗಿ ಉಳಿಯುತ್ತದೆ ಎಂದು ವ್ಯಾಪಾರ ವಿಶ್ಲೇಷಕರು ಹೇಳುತ್ತಾರೆ.
ಆರಂಭದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಕೇವಲ ಒಂದು ಹಾಡಿನೊಂದಿಗೆ ಬಿಡುಗಡೆಯಾದ ಈ ಚಿತ್ರವನ್ನು ನಂತರ 2004 ರಲ್ಲಿ ಕಲರ್ಫುಲ್ ಆಗಿ ಡಿಜಿಟಲ್‌ನಲ್ಲಿ ಮರು-ಬಿಡುಗಡೆ ಮಾಡಲಾಯಿತು. ಅಲ್ಲದೆ, ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವುದರ ಜೊತೆಗೆ, ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಭಾರತೀಯ ಸಿನಿಮಾ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. (ಏಜೆನ್ಸೀಸ್)