

Jagannath Rath Yatra : ಒಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವಿಗೀಡಾಗಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜಗನ್ನಾಥ, ಬಲಭದ್ರ ಮತ್ತು ಶುಭದ್ರ ದೇವಿಯ ವಿಗ್ರಹಗಳನ್ನು ಹೊತ್ತ ಮೂರು ರಥಗಳು, ಯಾತ್ರೆ ಪ್ರಾರಂಭಿಸಿದ ಜಗನ್ನಾಥ ದೇವಸ್ಥಾನದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಸ್ಥಾನದಲ್ಲಿ ಇರುವಾಗ ಈ ದುರ್ಘಟನೆ ಸಂಭವಿಸಿದೆ.
ಇಂದು (ಜೂನ್ 29) ಬೆಳಗಿನ ಜಾವ 4.30ರ ಸುಮಾರಿಗೆ ಪವಿತ್ರ ರಥಗಳು ಗುಂಡಿಚಾ ದೇವಸ್ಥಾನದಲ್ಲಿ ಇದ್ದವು. ಈ ವೇಳೆ ದರ್ಶನಕ್ಕಾಗಿ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕಾಲ್ತುಳಿತ ಪ್ರಾರಂಭವಾಯಿತು. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೂವರು ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಪ್ರಭಾತಿ ದಾಸ್ ಮತ್ತು ಬಸಂತಿ ಸಾಹು ಮತ್ತು 70 ವರ್ಷದ ಪ್ರೇಮಕಾಂತ್ ಮೊಹಂತಿ ಎಂದು ಗುರುತಿಸಲಾಗಿದೆ. ಮೂವರೂ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರ ವ್ಯವಸ್ಥೆ ಅಸಮರ್ಪಕವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿದ್ದವು. ಆದರೆ, ಜನಸಂದಣಿ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ದುರಂತಕ್ಕೆ ಕಾರಣವಾಯಿತು ಎಂದಿದ್ದಾರೆ.
ರಥಯಾತ್ರೆಯ ಸಮಯದಲ್ಲಿ, ಜಗನ್ನಾಥ, ಬಲಭದ್ರ ಮತ್ತು ಶುಭದ್ರ ದೇವಿಯ ವಿಗ್ರಹಗಳನ್ನು ಹೊಂದಿರುವ ಮೂರು ಭವ್ಯ ರಥಗಳನ್ನು ಭಕ್ತರು ಬೃಹತ್ ಸಂಖ್ಯೆಯಲ್ಲಿ ಎಳೆಯುತ್ತಾರೆ. ಪವಿತ್ರ ರಥಗಳನ್ನು ಗುಂಡಿಚ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಮೂರು ದೇವರುಗಳು ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗುವ ಮೊದಲು ಅಲ್ಲಿ ಒಂದು ವಾರ ಕಳೆಯುತ್ತಾರೆ.
ಇನ್ನು ಈ ಬಾರಿ ರಥಯಾತ್ರೆಯನ್ನು ಪ್ರಾರಂಭಿಸುವಲ್ಲಿನ ವಿಳಂಬದ ಬಗ್ಗೆ ರಾಜಕೀಯ ವಿವಾದ ಭುಗಿಲೆದ್ದಿದೆ. ಬಿಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದನ್ನು "ಭಯಾನಕ ಅವ್ಯವಸ್ಥೆ" ಎಂದಿದ್ದಾರೆ. ಈ ವರ್ಷ ಈ ದೈವಿಕ ಉತ್ಸವವನ್ನು ಆವರಿಸಿರುವ ಭಯಾನಕ ಅವ್ಯವಸ್ಥೆಗೆ ಕಾರಣರಾದ ಎಲ್ಲರನ್ನು ಮಹಾಪ್ರಭು ಜಗನ್ನಾಥ ಕ್ಷಮಿಸಲಿ ಎಂದು ಹೇಳಿದರು.
ಬಿಜೆಡಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಒಡಿಶಾ ಕಾನೂನು ಸಚಿವ ಪೃಥಿವಿರಾಜ್ ಹರಿಚಂದನ್, ಬಿಜೆಡಿ "ರಾಜಕೀಯ ಹೇಳಿಕೆಗಳನ್ನು" ನೀಡುತ್ತಿದೆ ಎಂದು ಟೀಕಿಸಿದರು. ಈ ಹಿಂದೆ ಬಿಜೆಡಿ ಸರ್ಕಾರ ತಪ್ಪುಗಳನ್ನು ಮಾಡಿತ್ತು ಮತ್ತು ಜಗನ್ನಾಥನನ್ನು ಅವಮಾನಿಸಿತ್ತು ಎಂದರು. ಅಲ್ಲದೆ, 1977ರಿಂದ ರಥಗಳು ಯಾವಾಗಲೂ ಎರಡನೇ ದಿನ ಗುಂಡಿಚಾ ದೇವಸ್ಥಾನವನ್ನು ತಲುಪುತ್ತವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)