'ಮೊಘಲ್​-ಎ-ಆಜಂ'ಗೆ 60 ವರ್ಷ ... ಈ ಕ್ಲಾಸಿಕ್​ ಬಗ್ಗೆ ನಿಮಗೆ ಗೊತ್ತಿರಬೇಕಾದ 10 ಅಂಶಗಳು

Mughal - E - Azam - Final
Published on

ಭಾರತೀಯ ಚಿತ್ರರಂಗದ ಕ್ಲಾಸಿಕ್​ ಚಿತ್ರಗಳಲ್ಲಿ ಒಂದಾದ ಕೆ. ಆಸಿಫ್​ ಅವರ 'ಮೊಘಲ್​-ಎ-ಆಜಂ'ಗೆ 60 ವರ್ಷ ತುಂಬಿದೆ. 1960ರ ಆಗಸ್ಟ್​ 5ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಪೃಥ್ವಿರಾಜ್​ ಕಪೂರ್​ ಅವರು ಅಕ್ಬರ್​ ಸಾಮ್ರಾಟನಾಗಿ, ದಿಲೀಪ್​ ಕುಮಾರ್​ ಅವರು ಶೆಹಜಾದ ಸಲೀಂ ಆಗಿ ಮತ್ತು ಮಧುಬಾಲಾ ಅವರು ಅನಾರ್ಕಲಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರವು ಆಗಿನ ಕಾಲಕ್ಕೆ ಸೂಪರ್​ ಹಿಟ್​ ಆಗಿದ್ದಷ್ಟೇ ಅಲ್ಲ, ಕೆಲವು ವರ್ಷಗಳ ನಂತರ ಕಲರ್​ನಲ್ಲಿ ಸಹ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈ ಕ್ಲಾಸಿಕ್​ ಚಿತ್ರದ ಬಗ್ಗೆ ನಿಮಗೆಷ್ಟು ಗೊತ್ತು? ಗೊತ್ತಿಲ್ಲದಿದ್ದರೆ, ಇಲ್ಲಿನ ನೋಡಿ ಚಿತ್ರದ ಹೈಲೈಟ್​ಗಳು.

1) 'ಮೊಘಲ್​-ಎ-ಆಜಂ' ಚಿತ್ರವು 1951ರಲ್ಲಿ ಪ್ರಾರಂಭವಾದರೂ, ಈ ಚಿತ್ರ ಮಾಡಬೇಕೆಂದು ನಿರ್ದೇಶಕ ಕೆ. ಆಸಿಫ್​ ಮೊದಲಿಗೆ ಹೊರಟಿದ್ದು 1944ರಲ್ಲಿ. ಆಗ ಚಿತ್ರ ಶುರುವಾದರೂ ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಆ ನಂತರ 1951ರಲ್ಲಿ ಶುರುವಾಗಿ, ಕೊನೆಗೆ 1960ರಲ್ಲಿ ಬಿಡುಗಡೆಯಾಯಿತು. ಅಲ್ಲಿಗೆ ಕೆ. ಆಸಿಫ್​ ಅವರ ಕನಸಿನ ಚಿತ್ರ ಬಿಡುಗಡೆಯಾಗುವುದಕ್ಕೆ 16 ವರ್ಷಗಳು ಬೇಕಾದವು.

2)ಈ ಚಿತ್ರದಲ್ಲಿ ಮೊದಲು ಸಪ್ರು, ಚಂದ್ರಮೋಹನ್​ ಮತ್ತು ನರ್ಗಿಸ್​ ಅವರು ಅಕ್ಬರ್​, ಸಲೀಂ ಮತ್ತು ಅರ್ನಾಕಲಿ ಪಾತ್ರಕ್ಕೆ ಗೊತ್ತಾಗಿದ್ದರು. ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಅಷ್ಟರಲ್ಲಿ ಚಂದ್ರಮೋಹನ್​ ಅವರ ನಿಧನದಿಂದ ಚಿತ್ರ ನಿಂತಿತು. ಆ ನಂತರ ಹೊಸ ತಾರಾಗಣದ ಜತೆಗೆ ಆಸಿಫ್​ ಅವರು ಈ ಚಿತ್ರ ಮುಂದುವರೆಸಿದರು.

3) ಈ ಚಿತ್ರದಲ್ಲಿನ ಯುದ್ಧದ ಸನ್ನಿವೇಶಗಳಿಗೆ 2000 ಒಂಟೆಗಳು, 4000 ಸಾವಿರ ಕುದುರೆಗಳು ಮತ್ತು 8000 ಸಾವಿರ ಜನರನ್ನು ಬಳಸಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತದೆ.

4) 'ಮೊಘಲ್​-ಎ-ಆಜಂ' ಚಿತ್ರವು ಆಗಿನ ಕಾಲಕ್ಕೆ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಆ ಕಾಲಕ್ಕೆ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಯೂ 'ಮೊಘಲ್​-ಎ-ಆಜಂ'ಗಿದೆ. ಈ ದಾಖಲೆಯನ್ನು 15 ವರ್ಷಗಳ ನಂತರ ಅಮಿತಾಭ್​ ಬಚ್ಚನ್​ ಮತ್ತು ಧರ್ಮೇಂದ್ರ ಅಭಿನಯದ 'ಶೋಲೆ' ಚಿತ್ರ ಮುರಿಯಿತು.

5) ಈ ಚಿತ್ರಕ್ಕಾಗಿ ಕಲಾ ನಿರ್ದೇಶಕ ಎಂ.ಕೆ. ಸಯ್ಯದ್​ ಅವರು ಕೆಲವು ಅದ್ಭುತವೆನ್ನುವಂತಹ ಸೆಟ್​ಗಳನ್ನು ನಿರ್ಮಿಸಿದ್ದರು. ಚಿತ್ರದಲ್ಲಿನ 'ಪ್ಯಾರ್​ ಕಿಯಾ ತೋ ಡರ್ನಾ ಕ್ಯಾ ...' ಹಾಡಿಗಾಗಿ ಶೀಶ್​ ಮಹಲ್​ ಸೆಟ್​ ನಿರ್ಮಿಸಲಾಗಿತ್ತು. ಈ ಹಾಡಿನ ಬಜೆಟ್​ನಲ್ಲಿ ಆಗಿನ ಕಾಲದಲ್ಲಿ ಒಂದು ಚಿತ್ರವನ್ನೇ ನಿರ್ಮಿಸಬಹುದಿತ್ತು ಎಂದು ಹೇಳಲಾಗುತ್ತದೆ.

6) ಈ ಚಿತ್ರಕ್ಕೆ ಬಳಸಲಾದ ಬಟ್ಟೆಗಳನ್ನು ದೆಹಲಿಯಲ್ಲಿ, ಫುಟ್​ವೆರ್​ನ್ನು ಆಗ್ರಾದಲ್ಲಿ, ಚಿನ್ನಾಭರಣಗಳನ್ನು ಹೈದರಾಬಾದ್​ನಲ್ಲಿ, ಕಿರೀಟಗಳನ್ನು ಕೊಲ್ಹಾಪುರದಲ್ಲಿ ಮತ್ತು ಶಸ್ತ್ರಾಸ್ತ್ರಗಳನ್ನು ರಾಜಸ್ತಾನದಲ್ಲಿ ವಿಶೇಷವಾಗಿ ತಯಾರಿಸಲಾಗಿತ್ತಂತೆ.

7) ಈ ಚಿತ್ರದ ಚಿತ್ರೀಕರಣಕ್ಕೆ 14 ಕ್ಯಾಮೆರಾಗಳನ್ನು ಬಳಸಲಾಗುತ್ತಿತ್ತಂತೆ. ಛಾಯಾಗ್ರಾಹಕ ಮಾಥುರ್​ ಅವರು ಒಂದು ಶಾಟ್​ಗೆ ಲೈಟಿಂಗ್​ ಮಾಡುವುದಕ್ಕೆ ಎಂಟು ಗಂಟೆ ಸಮಯ ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತದೆ. ಇನ್ನು ಈ ಚಿತ್ರಕ್ಕೆ 500 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು ವಿಶೇಷ.

8) ಈ ಚಿತ್ರ ಪ್ರಾರಂಭವಾಗಿದ್ದು ಬ್ಲಾಕ್​ ಆಂಡ್​ ವೈಟ್​ನಲ್ಲಾದರೂ ಒಂದು ಹಾಡು ಮತ್ತು ಕೆಲವು ದೃಶ್ಯಗಳನ್ನು ಕಲರ್​ನಲ್ಲಿ ಚಿತ್ರೀಕರಿಸಲಾಗಿದೆ. ಅದಕ್ಕೆ ಕಾರಣ, ಚಿತ್ರ ತಡವಾಗುತ್ತಿದ್ದಂತೆಯೇ, ಕಲರ್​ ಚಿತ್ರಗಳ ನಿರ್ಮಾಣ ಹೆಚ್ಚಾಗಿದೆ. ಹಾಗಾಗಿ, 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ...' ಹಾಡನ್ನು ಕಲರ್​ನಲ್ಲಿ ಶೂಟ್​ ಮಾಡಿದ ಆಸಿಫ್​, ಆ ನಂತರ ಇನ್ನಷ್ಟು ದೃಶ್ಯಗಳನ್ನು ಕಲರ್​ನಲ್ಲಿ ಚಿತ್ರೀಕರಿಸಿದ್ದರಂತೆ.

9) 'ಮೊಘಲ್​-ಎ-ಆಜಂ' ಚಿತ್ರೀಕರಣ ಮುಗಿದಾಗ ಸುಮಾರು 10 ಲಕ್ಷ ಅಡಿಯಷ್ಟು ಶೂಟ್​ ಮಾಡಲಾಗಿತ್ತಂತೆ. ಚಿತ್ರದ ಅವಧಿ 197 ನಿಮಿಷಗಳಾದ್ದರಿಂದ ಹಲವು ಹಾಡುಗಳನ್ನು ಮತ್ತು ದೃಶ್ಯಗಳಿಂದ ಕೊನೆಯ ಎಡಿಟ್​ನಿಂದ ಕೈಬಿಡಲಾಯಿತಂತೆ.

10) ಕಪ್ಪು-ಬಿಳುಪಿನಿಂದ ಕಲರ್​ಗೆ ಕನ್ವರ್ಟ್​ ಮಾಡಿದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ಮೊಘಲ್​-ಎ-ಆಜಂ' ಪಾತ್ರವಾಗಿದೆ. ಸಂಪೂರ್ಣ ಕಲರ್​ನಲ್ಲಿ ತಯಾರಾದ ಈ ಚಿತ್ರ 2004ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net