

ಆ ಕಡೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರು ತಮ್ಮ ಹೊಸ ಚಿತ್ರ 'ಮರ್ಡರ್' ಬಿಡುಗಡೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರೆ, ಇನ್ನೊಂದು ಕಡೆ ಆ ಚಿತ್ರದ ಬಿಡುಗಡೆಗೆ ತಡೆಯಾಜ್ನೆ ಕೊಡಬೇಕು ಎಂದು ಅಮೃತಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಷ್ಟಕ್ಕೂ ಅಮೃತಾಗೂ ಈ ಚಿತ್ರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿ ಬರಬಹುದು. ವಿಷಯವೇನೆಂದರೆ, ಅಮೃತಾ ಅವರ ಜೀವನದಲ್ಲಾದ ನೈಜ ಘಟನೆಯನ್ನಾಧರಿಸಿಯೇ ರಾಮ್ಗೋಪಾಲ್ ವರ್ಮಾ, 'ಮರ್ಡರ್' ಎಂಬ ಚಿತ್ರವನ್ನು ನಿರ್ದೇಶಿಸಿರುವುದು.
ಅಮೃತಾ ಮತ್ತು ಪ್ರಣಯ್ ಕೆಲವು ವರ್ಷಗಳ ಹಿಂದೆ ಮನೆಯವರ ಆಸೆಯ ವಿರುದ್ಧವಾಗಿ ಮದುವೆಯಾಗಿದ್ದರು. ಇದೇ ವಿಷಯವಾಗಿ ಎರಡೂ ಕುಟುಂಬದವರು ಸಿಟ್ಟಾಗಿದ್ದು, ಅಮೃತಾ ಮನೆಯವರು ಎರಡು ವರ್ಷಗಳ ಹಿಂದೆ ಪ್ರಣಯ್ನನ್ನು ಕೊಂದಿದ್ದರು. ಈ ವರ್ಷ ಅಮೃತಾ ಅವರ ತಂದೆ ಮಾರುತಿ ರಾವ್ ಸಹ ನಿಧನರಾಗಿದ್ದರು.
ಈ ಘಟನೆಯನ್ನೇ ಬೇಸ್ ಮಾಡಿ, 'ಮರ್ಡರ್' ಚಿತ್ರ ಮಾಡುತ್ತಿರುವುದಾಗಿ ವರ್ಮಾ ಘೋಷಿಸಿದ್ದರು. ಆದರೆ, ತಮ್ಮ ಅನುಮತಿಯನ್ನೇ ಪಡೆಯದೇ ತಮ್ಮ ಜೀವನವನ್ನಾಧರಿಸಿ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಮೃತಾ, ನಲಗೊಂಡಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: 10 ರೂಪಾಯಿ ಇಟ್ಕೊಂಡು ರೈಲಲ್ಲಿ ಬರದೇ ಇರಬಹುದು …
ಈ ಕುರಿತು ಮಾತನಾಡಿರುವ ಅಮೃತಾ, 'ಕಳೆದ ಕೆಲವು ವರ್ಷಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ನನ್ನ ಗಂಡನ ಮರ್ಡರ್ ಆಗಿದೆ. ನನ್ನ ತಂದೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಃಖದಲ್ಲಿರುವಾಗ ವರ್ಮಾ, ನಮ್ಮ ಜೀವನದಲ್ಲಾದ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಅವರಿಗೆ ಅನುಮತಿ ಕೊಟ್ಟಿದ್ದು ಯಾರು? ಹಾಗಾಗಿ ಅವರ ವಿರುದ್ಧ ದಾವೆ ಹೂಡಿದ್ದೇನೆ' ಎಂದು ಅಮೃತಾ ಹೇಳಿದ್ದಾರೆ.
ಈ ವಿಷಯವಾಗಿ ನ್ಯಾಯಾಲಯವು ವರ್ಮಾ ಮತ್ತು ತಂಡದವರಿಗೆ ಆಗಸ್ಟ್ ಆರರಂದು ಹಾಜರಾಗುವಂತೆ ಸಮನ್ಸ್ ನೀಡಿದೆ. ನಾಳೆ ವರ್ಮಾ ಕೋರ್ಟ್ಗೆ ಹಾಜರಾಗಬೇಕಿದ್ದು, ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.