ಹುಟ್ಟು, ಸಾವು, ಸತ್ಯದ ಸುತ್ತ ತುರ್ತು ನಿರ್ಗಮನ..

Review
Published on
  • ಚಿತ್ರ: ತುರ್ತು ನಿರ್ಗಮನ
  • ನಿರ್ಮಾಣ: ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್
  • ನಿರ್ದೇಶನ: ಹೇಮಂತ್ ಕುಮಾರ್
  • ತಾರಾಗಣ: ಸುನೀಲ್ ರಾವ್, ಸುಧಾರಾಣಿ, ಅಚ್ಯುತ್ ಕುಮಾರ್, ಹಿತಾ ಚಂದ್ರಶೇಖರ್, ರಾಜ್ ಬಿ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ತಾನು ಸತ್ತಿದ್ದೇನೆಂದು ಅವನಿಗೆ ನಂಬಿಕೆ ಬರುವುದಿಲ್ಲ. ಇಷ್ಟಕ್ಕೂ 32 ವರ್ಷ ಸಾಯುವ ವಯಸ್ಸಾ? ಜೀವನದಲ್ಲಿ ಏನೇನೋ ಮಾಡಬೇಕು ಅಂದುಕೊಂಡಿದ್ದವನಿಗೆ ಅಷ್ಟು ಬೇಗ ಸಾವು ಬಂದರೆ ಏನನ್ನಿಸಬಹುದು ಹೇಳಿ? ಇಲ್ಲ, ತನಗೆ ಸಾಯುವುದಕ್ಕೆ ಇಷ್ಟವಿಲ್ಲ, ಇನ್ನಷ್ಟು ದಿನ ಬದುಕಬೇಕು ಎಂದು ವಾದ ಮಾಡುತ್ತಾನೆ. ಸರಿ, ಮೂರು ದಿನದಲ್ಲಿ ಏನೆಲ್ಲಾ ಮಾಡುತ್ತೀಯೋ ಮಾಡಿ ಬಾ ಎಂದು ಅವನಿಗೆ ಜೀವ ಕೊಡಲಾಗುತ್ತದೆ. ಅವನು ಏನು ಮಾಡಬೇಕು ಅಂತ ಕಂಡುಕೊಳ್ಳುವವರೆಗೂ, ಆ ಮೂರು ದಿನಗಳಲ್ಲೇ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ ಎಂದು ಹೇಳಿಯೇ ಅವನನ್ನು ವಾಪಸ್ಸು ಕಳುಹಿಸಲಾಗುತ್ತದೆ. ಹೀಗೆ ಶುರುವಾಗುತ್ತದೆ ‘ತುರ್ತ ನಿರ್ಗಮನ’. ಕಥೆ ಕೇಳುವುದಕ್ಕೆ ವಿಭಿನ್ನವಾಗಿದೆ. ಕನ್ನಡದಲ್ಲಿ ಟೈಮ್ ಲೂಪ್ ಬಗ್ಗೆ, ಮ್ಯಾಜಿಕ್ ರಿಯಲಿಸಂ ಕುರಿತ ಚಿತ್ರಗಳು ಬಂದಿದ್ದು ಕಡಿಮೆಯೇ. ‘ತುರ್ತ ನಿರ್ಗಮನ’, ಆ ಸಾಲಿಗೆ ಸೇರುವ ಚಿತ್ರ. ಇಲ್ಲಿ ಹಾಡು, ಫೈಟ್, ಹೊಟ್ಟೆ ಹುಣ್ಣಾಗಿಸುವ ಕಾಮಿಡಿ... ಯಾವುದೂ ಇಲ್ಲ. ಆರಂಭದಲ್ಲೇ ನಾಯಕ ಸತ್ತು ಹೆಣವಾಗುತ್ತಾನೆ ಎಂದರೆ ಚಿತ್ರ ಹೇಗಿರಬಹುದು, ಮುಂದೆ ಏನಾಗಬಹುದು ಯೋಚಿಸಿ?

‘ತುರ್ತ ನಿರ್ಗಮನ’ ಮಾಸ್ ಅಂಶಗಳಿಲ್ಲದ ಗಂಭೀರವಾದ ಚಿತ್ರ. ಹುಟ್ಟು-ಸಾವು ಎರಡೂ ಖಚಿತ, ಅದರ ಮಧ್ಯೆ ಮನುಷ್ಯ ಏನು ಕಂಡುಕೊಳ್ಳುತ್ತಾನೆ, ಅದೇ ಸತ್ಯ ಎಂದು ಸಾರುವ ಚಿತ್ರ. ಬಹುಶಃ ಆ ಸತ್ಯ ಎಲ್ಲರಿಗೂ ಅರ್ಥವಾಗಿಬಿಟ್ಟರೆ ಬದುಕು ಹಸನು ಎಂದು ಹೇಳುವ ಚಿತ್ರ. ಇಂಥದ್ದೊಂದು ಗಂಭೀರವಾದ ಕಥೆಯನ್ನು ಇನ್ನಷ್ಟು ಗಂಭೀರವಾಗಿಸುತ್ತಾರೆ ನಿರ್ದೇಶಕ ಹೇಮಂತ್ ಕುಮಾರ್. ಬಹುಶಃ ಸರಳವಾಗಬಹುದಾಗಿದ್ದ ಒಂದು ಕಥೆಗೆ, ಇನ್ನಷ್ಟು ಲೇಯರ್​ಗಳನ್ನು ಸೇರಿಸುತ್ತಾ ಹೋಗುತ್ತಾರೆ. ಹಾಗಾಗಿ, ಚಿತ್ರ ಜಟಿಲವಾಗುತ್ತಾ ಹೋಗುತ್ತದೆ. ಯಾವುದು ನಿಜ, ಯಾವುದು ಭ್ರಮೆ ಎಂದು ಗೊತ್ತಾಗದಂತಾಗುತ್ತದೆ. ಕೊನೆಗೆ ಒಂದು ವಿಚಿತ್ರವಾದ ಪ್ರಪಂಚದಲ್ಲಿ ಕಳೆದು ಹೋಗುವಂತಾಗುತ್ತದೆ. ಆದರೂ ಕೊನೆಗೆ ಇದೊಂದು ವಿಭಿನ್ನ ಚಿತ್ರ ಎಂದಷ್ಟೇ ನೆನಪಿನಲ್ಲುಳಿಯುತ್ತದೆ. ಬಹಳ ವರ್ಷಗಳ ನಂತರ ಅಭಿನಯಕ್ಕೆ ಮರಳಿರುವ ಸುನೀಲ್ ರಾವ್​ಗೆ ಇದೊಂದು ವಿಶೇಷವಾದ ಚಿತ್ರ ಮತ್ತು ಈ ಅವಕಾಶವನ್ನು ಅವರು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್​ಗೂ ಬೇರೆ ರೀತಿಯ ಪಾತ್ರಗಳು ಸಿಕ್ಕಿವೆ ಮತ್ತು ಇಬ್ಬರೂ ನೆನಪಿನಲ್ಲುಳಿಯುತ್ತಾರೆ. ರಾಜ್ ಬಿ ಶೆಟ್ಟಿ, ಹಿತಾ ಚಂದ್ರಶೇಖರ್ ಇಷ್ಟವಾಗುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಗ್ರಾಫಿಕ್ಸ್ ಗಮನ ಸೆಳೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net