

ಬೆಂಗಳೂರು: ‘ಸಿಪಾಯಿ’ ಚಿತ್ರದಲ್ಲಿ ಎಮೋಷನ್ ಕಡಿಮೆ ಇತ್ತು ಎಂದು ಚಿತ್ರದ ಬಿಡುಗಡೆಯ ನಂತರ ನಾಯಕ ಸಿದ್ಧಾರ್ಥ್ ಮಹೇಶ್ಗೆ ಸ್ಪಷ್ಟವಾಯಿತಂತೆ. ಹಾಗಾಗಿ, ಮುಂದಿನ ಚಿತ್ರದಲ್ಲಿ ಸೆಂಟಿಮೆಂಟ್ ಹೆಚ್ಚಿರಬೇಕು ಎಂದು ತೀರ್ವನಿಸಿದ ಅವರು, ಸೆಂಟಿಮೆಂಟ್ ಜತೆಗೆ ಭಯೋತ್ಪಾದನೆ, ಕರೆನ್ಸಿ ಬದಲಾವಣೆ, ಸರ್ಜಿಕಲ್ ಸ್ಟ್ರೈಕ್ ಮುಂತಾದ ಹಲವು ವಿಷಯಗನ್ನು ಸೇರಿಸುತ್ತಾ ಹೋದರಂತೆ. ಹಾಗೆ ರೂಪುಗೊಂಡಿದ್ದೇ ‘ಗರುಡ’.
ಮೂರ್ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ‘ಗರುಡ’ ಈ ಶುಕ್ರವಾರ (ಮೇ 20) ಬಿಡುಗಡೆಯಾಗುತ್ತಿದೆ. ನೃತ್ಯ ನಿರ್ದೇಶಕ ಧನು ಕುಮಾರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದು, ಇತ್ತೀಚೆಗೆ ಹಾಡುಗಳು ಬಿಡುಗಡೆಯಾಗಿವೆ.
‘ಗರುಡ’ ಕುರಿತು ಮಾತನಾಡುವ ಸಿದ್ಧಾರ್ಥ್, ‘ಇಲ್ಲಿ ನಾಯಕನ ವ್ಯಕ್ತಿತ್ವ ಗರುಡನ ತರಹ. ಗರುಡ ಹೇಗೆ ಎಷ್ಟೇ ಎತ್ತರದಲ್ಲಿ ಹಾರಿದರೂ ಅದಕ್ಕೆ ಸೂಕ್ಷ್ಮ ದೃಷ್ಟಿ ಇರುತ್ತದೋ, ನಾಯಕ ಸಹ ಅಷ್ಟೇ ಸೂಕ್ಷ್ಮ ದೃಷ್ಟಿ, ಆಲೋಚನೆಗಳ ವ್ಯಕ್ತಿತ್ವದವನು. ಹಾಗಾಗಿ, ನಮ್ಮ ಚಿತ್ರಕ್ಕೆ ಈ ಹೆಸರು ಸೂಕ್ತ ಎಂದನಿಸಿತು. ಕಥೆ ಮಾಡುವಾಗಲೇ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಒಂದು ಪ್ರಮುಖ ಪಾತ್ರ ಮಾಡಬೇಕು ಎಂದು ತೀರ್ವನಿಸಿದ್ದೆವು. ಕಿಟ್ಟಪ್ಪ ಅಭಿನಯಿಸಲು ಒಪ್ಪಿದರು. ಐಂದ್ರಿತಾ ರೇ, ಆಶಿಕಾ ರಂಗನಾಥ್, ರಂಗಾಯಣ ರಘು ಮುಂತಾದವರು ನಟಿಸುವುದಕ್ಕೆ ಒಪ್ಪಿಕೊಂಡರು’ ಎಂದು ವಿವರ ನೀಡುತ್ತಾರೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್ ಮತ್ತು ವಿನೋದ್ ಪ್ರಭಾಕರ್ ಬಂದಿದ್ದರು. ಮಿಕ್ಕಂತೆ ಆಶಿಕಾ ರಂಗನಾಥ್, ಕಿಟ್ಟಿ, ಐಂದ್ರಿತಾ ತಮ್ಮ ಪಾತ್ರಗಳ ಬಗ್ಗೆ ಮಾತನಾಡುವುದರ ಜತೆಗೆ, ಯಶಸ್ವಿಯಾಗಲೆಂದು ಹಾರೈಸಿದರು.