ದ್ವಿಭಾಷೆಯಲ್ಲಿ ವೀರ ಕಂಬಳ; ಕನ್ನಡ-ತುಳು ಸಿನಿಮಾ

Kambala
Published on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಇಷ್ಟೊತ್ತಿಗಾಗಲೇ ‘ರಾಜವೀರ ಮದಕರಿ ನಾಯಕ’ ಚಿತ್ರದ ಶೂಟಿಂಗ್ ಮುಗಿಸಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಆ ಸಿನಿಮಾ ಶುರುವಾಗಲೇ ಇಲ್ಲ. ಹೀಗಿರುವಾಗಲೇ ನಿರ್ದೇಶಕರು ದೃಷ್ಟಿ ಹೊರಳಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಕಂಬಳದ ಹಿನ್ನೆಲೆ ಇರುವ ಚಿತ್ರ ಮಾಡಲು ಸಿದ್ಧತೆ ನಡೆಸಿದ್ದಾರೆ. ಕನ್ನಡದಲ್ಲಿ ‘ವೀರ ಕಂಬಳ’ ಶೀರ್ಷಿಕೆಯಾದರೆ, ತುಳುವಿನಲ್ಲಿ ‘ಬಿರ್ದ್​ದ ಕಂಬುಲ’ ಟೈಟಲ್ ಅಂತಿಮವಾಗಿದೆ.

ಈ ಸಿನಿಮಾ ಸಲುವಾಗಿಯೇ ಮಂಗಳೂರಿನಲ್ಲಿ ಮಾಹಿತಿ ನೀಡಿರುವ ನಿರ್ದೇಶಕರು, ‘ಸಿನಿಮಾದ ಕತೆ-ಚಿತ್ರಕತೆ ಹಾಗೂ ನಿರ್ದೇಶನ ಜವಾಬ್ದಾರಿ ನಾನೇ ವಹಿಸಿಕೊಂಡಿದ್ದೇನೆ. ತುಳು-ಕನ್ನಡದಲ್ಲಿ ನಿರ್ವಣವಾಗಿ ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಚಿತ್ರ ಡಬ್ ಮಾಡಲಾಗುವುದು. ಗುಣಪಾಲ ಕಡಂಬರ ಮಾರ್ಗದರ್ಶನದೊಂದಿಗೆ ಅರುಣ್ ರೈ ತೋಡಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯದಲ್ಲಿ ಸಚಿವ ಎಸ್.ಅಂಗಾರ ಶೀರ್ಷಿಕೆ ಬಿಡುಗಡೆಗೊಳಿಸಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಚಿತ್ರೀಕರಣ ಆರಂಭಗೊಳಿಸಲು ಅಣಿಯಾಗಿದ್ದೇವೆ’ ಎಂದರು. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net