

ಬೆಂಗಳೂರು: ಶ್ರೀನಿ ಅಭಿನಯದ ಮತ್ತು ನಿರ್ದೇಶಬನದ 'ಓಲ್ಡ್ ಮಾಂಕ್' ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಮಾಂಕ್ನ ಸರದಿ. ಈ ಬಾರಿ ಒಂದಿಷ್ಟು ಹೊಸಬರು ಸೇರಿ, 'ಮಾಂಕ್ ದಿ ಯಂಗ್' ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ರಿಷಭ್ ಶೆಟ್ಟಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
'ಮಾಂಕ್ ದಿ ಯಂಗ್' ಚಿತ್ರವನ್ನು ಮಾಸ್ಚಿತ್ ಸೂರ್ಯ ಎನ್ನುವವರು ನಿರ್ದೇಶಿಸಿದ್ದಾರೆ. ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ನಾಯಕನಾಗಿ ಸರೋವರ್ ಹಾಗೂ ನಾಯಕಿಯಾಗಿ ಸೌಂದರ್ಯ ಗೌಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಐದು ಜನ ನಿರ್ಮಾಪಕರು. ಐದು ನಿರ್ಮಾಪಕರೂ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಬಿರುಸಿನಿಂದ ಸಾಗಿದೆ.
ಇದೊಂದು ವಿಭಿನ್ನ ಚಿತ್ರ ಎನ್ನುವ ನಾಯಕ ಸರೋವರ್, 'ಎಲ್ಲರೂ ತಮ್ಮ ಚಿತ್ರವನ್ನು ವಿಭಿನ್ನವಾಗಿ ಮಾಡಿದ್ದೇವೆ ಎನ್ನುತ್ತಾರೆ. ನಮ್ಮದು ನಿಜಕ್ಕೂ ವಿಭಿನ್ನ ಚಿತ್ರ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಆಗಲಿದೆ. ಟ್ರೇಲರ್ ನೋಡಿ ನೀವೇ ತೀರ್ಮಾನಿಸಿ. ಒಂದೊಳ್ಳೆಯ ಅಡುಗೆ ಎಲ್ಲರಿಗೂ ರುಚಿಸುವ ಹಾಗೆ, ನಮ್ಮ ಚಿತ್ರ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ' ಎನ್ನುತ್ತಾರೆ.
ನಾಯಕಿ ಸೌಂದರ್ಯ ಗೌಡ ಹೊಳೆನರಸೀಪುರದ ಹುಡುಗಿಯಂತೆ. 'ನನಗೆ ನಟಿಸುವ ಆಸೆ. ಅದಕ್ಕೆ ಮನೆಯವರ ಪ್ರೋತ್ಸಾಹ ಇರಲಿಲ್ಲ. ನಾನು ಸಿವಿಲ್ ಎಂಜಿನಿಯರಿಂಗ್ ಓದಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ನಟನೆಯ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಬಂದು ಈ ಚಿತ್ರದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಚಿತ್ರ. ರೂಪದರ್ಶಿಯಾಗಿಯೂ ತೊಡಗಿಸಿಕೊಂಡಿದ್ದೇನೆ. ಈ ಚಿತ್ರದ ಕಥೆ ಬ್ರಿಟೀಷರ ಕಾಲದಲ್ಲಿ ನಡೆಯುತ್ತದೆ. ಹಾಗಾಗಿ ಈ ಶೀರ್ಷಿಕೆ ಇಟ್ಟಿದ್ದಾರೆ' ಎನ್ನುತ್ತಾರೆ ಸೌಂದರ್ಯ.
ಎಲ್ಲರು ತಮ್ಮ ಚಿತ್ರವನ್ನು ವಿಭಿನ್ನವಾಗಿ ಮಾಡಿದ್ದೇವೆ ಎನ್ನುತ್ತಾರೆ. ಅದೇ ರೀತಿ ನಾವು ಹೇಳುತ್ತೇವೆ. ಆದರೆ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಟ್ರೇಲರ್ ನೋಡಿ ನೀವೇ ತೀರ್ಮಾನಿಸಿ. ನಿಜಕ್ಕೂ ಒಳ್ಳೆಯ ಅಡುಗೆ ಎಲ್ಲರಿಗೂ ರುಚಿಸುವ ಹಾಗೆ, ನಮ್ಮ ಚಿತ್ರ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದರು ಚಿತ್ರದ ನಿರ್ಮಾಪಕ ಹಾಗೂ ನಾಯಕ ಸರೋವರ.
ಈ ಚಿತ್ರವನ್ನು ಸರೋವರ್, ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ, ಲಾಲ್ ಚಂದ್, ಗೋಪಿ ಚಂದ್ ಜತೆಯಾಗಿ ನಿರ್ಮಿಸಿದ್ದಾರೆ. ಸರೋವರ್ ಮತ್ತು ಸೌಂದರ್ಯ ಜತೆಗೆ ಪ್ರಣವಮೂರ್ತಿ, ಉಷಾ ಭಂಡಾರಿ ಮುಂತಾದವರು ನಟಿಸಿದ್ದಾರೆ.