

ಹೈದರಾಬಾದ್: ತೆಲುಗು ಬಿಗ್ಬಾಸ್ 4ನೇ ಅವೃತ್ತಿಯಿಂದ ಹೊರಬಿದ್ದ ಬೆನ್ನಲ್ಲೇ ನಟಿ ಮೊನಾಲ್ ಗಜ್ಜರ್, ಸಹಸ್ಪರ್ಧಿ ನಟ ಅಭಿಜಿತ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಟ್ಟದಾಗಿ ಟ್ರೋಲ್ ಮಾಡುವ ಮೂಲಕ ಅಭಿಜಿತ್ ಅಭಿಮಾನಿಗಳು ನನ್ನ ಸಹೋದರಿಯ ಮನಸ್ಸಿಗೆ ನೋವುಂಟು ಮಾಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮೊನಾಲ್ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಮೊನಾಲ್ ಬಿಗ್ಬಾಸ್ ಹೊರಬೀಳುವ ಮುನ್ನ ಅವರ ಸಹೋದರಿ ಹೇಮಾಲಿ ಬಿಗ್ಬಾಸ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಭಿಜಿತ್ ಬಗ್ಗೆ ಹೇಮಾಲಿ ಮಾಡಿದ ಕಾಮೆಂಟ್ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದು, ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ತುಂಬಾ ಕೆಟ್ಟದಾಗೆಲ್ಲಾ ಟ್ರೋಲ್ ಮಾಡುತ್ತಿದ್ದಾರೆಂದು ಮೊನಾಲ್ ದೂರಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ಮೊನಾಲ್, ಅಭಿಜಿತ್ ನನ್ನ ವಿರುದ್ಧ ಬೆನ್ನ ಹಿಂದೆಯೇ ಮಾತನಾಡಿದರು. ಆ ರೀತಿ ಅವರು ಮಾತನಾಡಬಾರದು. ಅನೇಕ ಬಾರಿ ಆ ರೀತಿ ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಸಹೋದರಿ ಕಾಮೆಂಟ್ ಮಾಡಿದ್ದಕ್ಕೆ ಆಕೆಯನ್ನೇ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ಹೀಗಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆಂದು ತಿಳಿಸಿದ್ದಾರೆ. (ಏಜೆನ್ಸೀಸ್)