

ತಿರುವನಂತಪುರಂ : ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಹನಿ ರೋಸ್ ( Honey Rose ) ತಮ್ಮ ಸೌಂದರ್ಯ ಹಾಗೂ ನಟನೆಯಿಂದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಹಾಟ್ ಲುಕ್ಗಳಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸಾಮಾನ್ಯವಾಗಿ ಫೋಟೋಶೂಟ್‌ಗಳು ಮತ್ತು ಫಿಟ್‌ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುವ ಹನಿ ರೋಸ್, ಈ ಬಾರಿ ವಿಭಿನ್ನವಾಗಿ ಶಾಸ್ತ್ರೀಯ ನೃತ್ಯದ ಹೆಜ್ಜೆಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಟ್ರೆಂಡಿಂಗ್ 'ತಾಳಂ ಟ್ರಿಪ್' ಹಾಡಿಗೆ ಸರಳವಾದ ಕುರ್ತಿಯಲ್ಲಿ ಅತ್ಯಂತ ಸೊಗಸಾಗಿ ಹೆಜ್ಜೆ ಹಾಕಿರುವ ನಟಿಯ ವಿಡಿಯೋ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ಹನಿ ರೋಸ್ ಅವರ ಈ ಕ್ಲಾಸಿಕಲ್ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಅಭಿಮಾನಿಗಳು ನಟಿಯ ಅಭಿನಯ ಮತ್ತು ಗ್ರೇಸ್‌ಗೆ ಮನಸೋತಿದ್ದಾರೆ. ಖ್ಯಾತ ಗಾಯಕಿ ರಿಮಿ ಟಾಮಿ, ಬಿಜು ಧ್ವನಿತರಂಗ್, ರಾಧಿಕಾ ರಾಧಾಕೃಷ್ಣನ್ ಸೇರಿದಂತೆ ಹಲವು ತಾರೆಯರು ಹನಿ ರೋಸ್ ಅವರ ನೃತ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಎಂತಹ ಅದ್ಭುತ ಲಾವಣ್ಯ!", "ನಿಜಕ್ಕೂ ನಯಮನೋಹರ ಅಭಿನಯ" ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ವಿಡಿಯೋಗೆ ಲೈಕ್ಸ್ ಮತ್ತು ಶೇರ್‌ಗಳ ಸುರಿಮಳೆ ಗೈಯುತ್ತಿದ್ದಾರೆ.
ಇಡುಕ್ಕಿ ಜಿಲ್ಲೆಯ ಮೂಲಮಟ್ಟಂ ಎಂಬ ಸಣ್ಣ ಊರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಹನಿ ರೋಸ್, ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಿರ್ದೇಶಕ ವಿನಯನ್ ಅವರ 'ಬಾಯ್‌ಫ್ರೆಂಡ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಸಣ್ಣ ಹಾಗೂ ದೊಡ್ಡ ಬಜೆಟ್‌ನ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟರ ಜತೆಗಷ್ಟೇ ಅಲ್ಲದೆ, ಫಹಾದ್ ಫಾಸಿಲ್ ಮತ್ತು ಜಯಸೂರ್ಯ ಅವರಂತಹ ಈ ಕಾಲದ ಯುವ ನಟರೊಂದಿಗೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರೊಂದಿಗೆ ಬರೋಬ್ಬರಿ 4 ಸಿನಿಮಾಗಳಲ್ಲಿ ನಟಿಸಿರುವ ಹನಿ ರೋಸ್, ತೆಲುಗು ಚಿತ್ರರಂಗದಲ್ಲೂ ಎನ್‌ಟಿಆರ್ ಅವರ ಪುತ್ರ ನಂದಮೂರಿ ಬಾಲಕೃಷ್ಣ ಅವರೊಂದಿಗೆ ನಟಿಸಿ ಸೌತ್ ಇಂಡಿಯಾದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರ ಅಭಿನಯದ 'ತ್ರಿವೇಂಡ್ರಮ್ ಲಾಡ್ಜ್' ಚಿತ್ರದ ಪಾತ್ರವು ಇವರ ಅಭಿನಯ ಜೀವನದಲ್ಲೇ ಅತ್ಯಂತ ದೊಡ್ಡ ತಿರುವು ನೀಡಿದ ಸಿನಿಮಾವಾಗಿದೆ.
ಪ್ರಸ್ತುತ, ರಾಹುಲ್ ಮಣಂಬಟ್ ಅವರ ಸಣ್ಣ ಕತೆಯನ್ನು ಆಧರಿಸಿ ಆನಂದಿನಿ ಬಾಲಾ ಅವರ ಸಾರಥ್ಯ ಹಾಗೂ ಅಬ್ರಿಡ್ ಶೈನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ರಚೆಲ್' (Rachel) ಎಂಬ ಬಹುನಿರೀಕ್ಷಿತ ಸಿನಿಮಾದಲ್ಲಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜೆನ್ಸೀಸ್).