

ಮಾಲಿವುಡ್ ನಟ ಮೋಹನ್ ಲಾಲ್‌ಗೆ 2025ರ ಮೊದಲರ್ಧ ಡಬಲ್ ಖುಷಿ ನೀಡಿದೆ. ಈ ಐದು ತಿಂಗಳಲ್ಲಿ ಅವರ ನಟನೆಯ ಎರಡು ಸಿನಿಮಾಗಳು ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಮಾ.27ರಂದು ಬಿಡುಗಡೆಯಾದ ‘ಎಲ್ 2: ಎಂಪುರಾನ್’ ವಿವಾದದ ಮಧ್ಯೆಯೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ಒಂದು ತಿಂಗಳ ಅಂತರದಲ್ಲಿ ಅವರ ಮತ್ತೊಂದು ಸಿನಿಮಾ ‘ತುಡರುಂ’ ರಿಲೀಸ್ ಆಗಿತ್ತು. ಕ್ರೈಂ-ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಶೋಭನಾ ಮುಖ್ಯಭೂಮಿಕೆಯಲ್ಲಿದ್ದರು. ಏ. 25ರಂದು ವಿಶ್ವಾದ್ಯಂತ ತೆರೆಗೆ ಬಂದ ಈ ಸಿನಿಮಾ ಮೊದಲ ವಾರದಲ್ಲಿಯೇ 130 ಕೋಟಿ ರೂ. ಗಳಿಕೆ ಮಾಡಿತ್ತು. ಇದಾದ ಬಳಿಕ ಈ ‘ತುಡರುಂ’ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿದ್ದು, ಕೇರಳ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸುತ್ತಿದೆ. ಸಿನಿಮಾ ಇದೀಗ 19ನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವಾದ್ಯಂತ 205 ಕೋಟಿ ರೂ. ಗಳಿಕೆ ಮಾಡಿದೆ. ಒಟ್ಟು ಗಳಿಕೆಯಲ್ಲಿ ಅರ್ಧಪಾಲು ಕೇರಳ ರಾಜ್ಯದಿಂದಲೇ ಬಂದಿರುವುದು ವಿಶೇಷ. ಕೇರಳದಲ್ಲಿ 100 ಕೋಟಿ ರೂ. ಗಳಿಸಿದ್ದು, ಆ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಮಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೊದಲು ಟೋವಿನೊ ಥಾಮಸ್ ಅಭಿನಯದ ‘2018’ ಚಿತ್ರ ಕೇರಳದಲ್ಲಿ 83.31 ರೂ ಕೋಟಿ ಗಳಿಸಿತ್ತು. ಈ ದಾಖಲೆಯನ್ನು ‘ತುಡರುಂ’ ಮುರಿದು ಇದೀಗ ಮೊದಲ ಸ್ಥಾನ ಅಲಂಕರಿಸಿದೆ. -ಏಜೆನ್ಸೀಸ್